ದೆಹಲಿ: ಸಂಸತ್ ನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ನಿರ್ಣಯವನ್ನು ಸದನವು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಪ್ರತಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ. ಈ ಸಂದರ್ಭದಲ್ಲಿ ಸಂಸತ್ ನ ಬಾವಿಗಿಳಿದು ಹೋರಾಟ ನಡೆಸಿವೆ. ಇದಕ್ಕೆ ಸಭಾಪತಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧನ್ಯವಾದ ನಿರ್ಣಯ ಕೈಗೆತ್ತಿಕೊಂಡ ಸಂದರ್ಭದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ -ನೀಟ್ ( NEET) ನಲ್ಲಿನ ಅಕ್ರಮಗಳ ಕುರಿತು ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದವು. ಈ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಈ ವೇಳೆ ಮಲ್ಲಿಕಾರ್ಜನ ಖರ್ಗೆ (Mallikarjun Kharge) ಸೇರಿದಂತೆ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗೆ ನುಗ್ಗಿದ್ದಕ್ಕೆ ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಖರ್ (Jagdeep Dhankhar) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸಂಸತ್ತಿನ ಇತಿಹಾಸದಲ್ಲಿ ಇಂದು ವಿರೋಧ ಪಕ್ಷದ ನಾಯಕರೇ ಬಾವಿಗೆ ಇಳಿದು ಬಂದಿದ್ದು, ಇದು ಕಳಂಕಿತ ದಿನ. ಇದು ಹಿಂದೆಂದೂ ಸಂಭವಿಸಿಲ್ಲ. ನನಗೆ ನೋವಾಗಿದೆ, ಆಘಾತವಾಗಿದೆ. ಪ್ರತಿಪಕ್ಷದ ನಾಯಕ, ಉಪನಾಯಕ ಸದನದ ಬಾವಿಗಿಳಿದಿರುವಷ್ಟರ ಮಟ್ಟಿಗೆ ಭಾರತೀಯ ಸಂಸದೀಯ ಸಂಪ್ರದಾಯ ಹದಗೆಟ್ಟಿದೆ ಎಂದು ಉಪರಾಷ್ಟ್ರಪತಿ ಧನ್ಖರ್ ಬೇಸರ ವ್ಯಕ್ತಪಡಿಸಿ, ಆಕ್ರೋಶ ವ್ಯಕ್ತಪಡಿಸಿದರು.
