ವಾಷಿಂಗ್ಟನ್: ನಮ್ಮ ಸೌರವ್ಯೂಹವನ್ನು ಪ್ರವೇಶಿಸಿರುವ ನಿಗೂಢ ಅಂತರತಾರಾ ಧೂಮಕೇತು (Interstellar comet) ‘3ಐ/ಅಟ್ಲಾಸ್‘ (3I/Atlas) ಅನ್ಯಗ್ರಹ ಜೀವಿಗಳ ಬಾಹ್ಯಾಕಾಶ ನೌಕೆಯಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಅಮೆರಿಕ ಕಾಂಗ್ರೆಸ್ ಸಮಿತಿ ಸ್ಪಷ್ಟಪಡಿಸಿದೆ .
ಭೂಮಿಗಿಂತಲೂ ಹಳೆಯದು ಈ ಧೂಮಕೇತು!
ಜುಲೈ 1, 2025ರಂದು ಪತ್ತೆಯಾದ ಈ ಧೂಮಕೇತುವಿನ ಬಗ್ಗೆ ವಿಶ್ವಾದ್ಯಂತ ತೀವ್ರ ಕುತೂಹಲ ಮೂಡಿದೆ. ಯುಎಸ್ ಹೌಸ್ ಸೈನ್ಸ್ ಕಮಿಟಿಯ ಜಾರ್ಜ್ ವೈಟ್‌ಸೈಡ್ಸ್ ಅವರ ಪ್ರಕಾರ, ಈ ಧೂಮಕೇತು ಸುಮಾರು 5 ರಿಂದ 8 ಶತಕೋಟಿ ವರ್ಷಗಳಷ್ಟು ಹಳೆಯದಾಗಿದೆ. ಅಂದರೆ, ಇದು ನಮ್ಮ ಭೂಮಿಗಿಂತಲೂ ಹಳೆಯದು ಎಂಬುದು ಇದರ ವಿಶೇಷ .

ನಾಸಾದಿಂದ ವ್ಯಾಪಕ ಕಣ್ಗಾವಲು
ಈ ಅಪರೂಪದ ಆಕಾಶಕಾಯವನ್ನು ಅಧ್ಯಯನ ಮಾಡಲು ನಾಸಾ ಸೌರವ್ಯೂಹದಾದ್ಯಂತ ದೊಡ್ಡ ಮಟ್ಟದ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ನಾಸಾದ ಹನ್ನೆರಡು ಬಾಹ್ಯಾಕಾಶ ನೌಕೆಗಳು ಮತ್ತು ಟೆಲಿಸ್ಕೋಪ್‌ಗಳು ಇದರ ಮೇಲೆ ಕಣ್ಣಿಟ್ಟಿವೆ.
ಈ ಧೂಮಕೇತು ಮಂಗಳ ಗ್ರಹದ ಸಮೀಪದಿಂದ (ಸುಮಾರು 1.9 ಕೋಟಿ ಮೈಲಿ ದೂರದಲ್ಲಿ) ಹಾದುಹೋಗಿದೆ.
ಮಂಗಳ ಗ್ರಹದ ಮೇಲಿರುವ ನಾಸಾದ ‘ಪರ್ಸಿವರೇನ್ಸ್ ರೋವರ್’ ಮತ್ತು ಕಕ್ಷೆಯಲ್ಲಿರುವ ‘ಎಂಆರ್‌ಒ’ (MRO) ಉಪಗ್ರಹಗಳು ಇದರ ಚಿತ್ರಗಳನ್ನು ಸೆರೆಹಿಡಿದಿವೆ .
ಇದು ಮೂರನೇ ಅತಿಥಿ
‘3ಐ/ಅಟ್ಲಾಸ್’ ನಮ್ಮ ಸೌರವ್ಯೂಹಕ್ಕೆ ಬಂದಿರುವ ಮೂರನೇ ದೃಢೀಕೃತ ಅಂತರತಾರಾ ಅತಿಥಿಯಾಗಿದೆ. ಇದಕ್ಕೂ ಮೊದಲು 2017ರಲ್ಲಿ ‘ಔಮುಅಮುಅ’ (Oumuamua) ಮತ್ತು 2019ರಲ್ಲಿ ‘2ಐ/ಬೊರಿಸೊವ್’ (2I/Borisov) ಧೂಮಕೇತುಗಳು ನಮ್ಮ ಸೌರವ್ಯೂಹಕ್ಕೆ ಭೇಟಿ ನೀಡಿದ್ದವು. ಇವುಗಳ ವೇಗ ಮತ್ತು ಚಲನೆಯನ್ನು ಗಮನಿಸಿದರೆ, ಇವು ನಮ್ಮ ಸೌರವ್ಯೂಹದ ಗುರುತ್ವಾಕರ್ಷಣೆಗೆ ಸಿಲುಕದೆ ಹೊರಗಿನಿಂದ ಬಂದಿವೆ ಎಂಬುದು ದೃಢಪಟ್ಟಿದೆ. ಒಟ್ಟಿನಲ್ಲಿ, ಇದೊಂದು ಪ್ರಾಚೀನ ಆಕಾಶಕಾಯವೇ ಹೊರತು ಅನ್ಯಗ್ರಹ ಜೀವಿಗಳ ವಾಹನವಲ್ಲ ಎಂಬುದು ವಿಜ್ಞಾನಿಗಳ ಸ್ಪಷ್ಟನೆ.
ಇದನ್ನೂ ಓದಿ: ಜೈಪುರ, ಅಹಮದಾಬಾದ್ ಸ್ಫೋಟದ ಆರೋಪಿಗಳಿಗೂ ಅಲ್ ಫಲಾಹ್ ನಂಟು : ಉಗ್ರರ ಕೇಂದ್ರವಾಗಿದ್ದ ವಿವಿ!


















