ಭೂಮಂಡಲದಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಎಲ್ಲೆಡೆ ಆತಂಕ ಮನೆ ಮಾಡುತ್ತಿದೆ. ರಷ್ಯಾ – ಉಕ್ರೇನ್, ಇಸ್ರೇಲ್ – ಹಮಾಸ್ ಮಧ್ಯೆ ಈಗಾಗಲೇ ಭೀಕರ ಯುದ್ಧ ಆರಂಭವಾಗಿದೆ. ಈ ಮಧ್ಯೆ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಮಧ್ಯೆ ಯುದ್ಧದ ಆತಂಕ ಆವರಿಸಿದೆ. ಆ ಆತಂಕದ ಮಧ್ಯೆಯೇ ಚೀನಾ ರಾಷ್ಟ್ರ ತೈವಾನ್ ಸುತ್ತುವರೆದಿದ್ದು, ಮತ್ತೊಂದು ಯುದ್ಧಕ್ಕೆ ನಾಂದಿ ಹಾಡಿದಂತಾಗಿದೆ.
ಚೀನಾದ ನೌಕಾ ಪಡೆ, ವಾಯು ಪಡೆ, ಭೂ ಸೇನೆಗಳು ಸಮರ ತಾಲೀಮು ಆರಂಭಿಸಿವೆ. ದ್ವೀಪ ರಾಷ್ಟ್ರ ತೈವಾನ್ ದೇಶವನ್ನು ಸುತ್ತುವರಿದಿದ್ದು, ಈ ಬೆನ್ನಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಯುದ್ಧಕ್ಕೆ ಕರೆ ನೀಡಿದ್ದಾರೆ.
ಚೀನಾದ ಸರ್ಕಾರಿ ಮಾಧ್ಯಮವೊಂದು ಈ ಕುರಿತು ವರದಿ ಮಾಡಿದ್ದು, ಚೀನಾ ಸೇನೆಯಾದ ಪೀಪಲ್ ಲಿಬರೇಷನ್ ಆರ್ಮಿಯ ಕ್ಷಿಪಣಿ ಪಡೆಯ ಸಿದ್ದತೆ ವೀಕ್ಷಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಕ್ಷಿಪಣಿ ಬ್ರಿಗೇಡ್ ಗೆ ಆಗಮಿಸಿದ್ದು, ಅಲ್ಲಿ ಯುದ್ದಕ್ಕೆ ಸಮಗ್ರವಾಗಿ ಸಿದ್ದತೆ ನಡೆಸಲು ಸೂಚಿಸಿದ್ದಾರೆ. ಎಲ್ಲ ರೀತಿಯ ಯುದ್ಧ ಸನ್ನದ್ಧತೆ ಇರುವ ಕುರಿತಾಗಿ ಖಚಿತಪಡಿಸಿಕೊಳ್ಳಲು ಕರೆ ನೀಡಿದ್ದಾರೆ ಎನ್ನಲಾಗಿದೆ.
ಚೀನಾ ದೇಶದ ಗಡಿಗೆ ತಾಗಿಕೊಂಡಂತೆ ತೈವಾನ್ ದೇಶ ಇದೆ. ಆದರೆ, ಇದು ತನ್ನ ನೆಲ ಎಂದು ಚೀನಾ ಹೇಳುತ್ತಿದೆ. ದಶಕಗಳ ಹಿಂದೆ ಚೀನಾದ ರಾಜಕೀಯ ನಿರಾಶ್ರಿತರು ತೈವಾನ್‌ಗೆ ಪರಾರಿಯಾಗಿ ಅಲ್ಲಿಯೇ ತಮ್ಮ ಸರ್ಕಾರ ರಚಿಸಿಕೊಂಡು ಪ್ರತ್ಯೇಕ ದೇಶ ಎಂದು ಘೋಷಿಸಿಕೊಂಡಿದ್ದಾರೆ. ಸ್ವಾಯತ್ತ ರಾಷ್ಟ್ರ ತೈವಾನ್ ಗೆ ಅಮೆರಿಕ, ವಿಶ್ವ ಸಂಸ್ಥೆಯಿಂದ ಹಿಡಿದು ಜಾಗತಿಕ ಮಟ್ಟದ ಮಾನ್ಯತೆ ಸಿಕ್ಕಿದೆ.
ಕಳೆದ ವಾರ ಚೀನಾ ಸೇನೆ ಸಮರಾಭ್ಯಾಸದ ಸೋಗಿನಲ್ಲಿ ಅಪಾರ ಸಂಖ್ಯೆಯ ಯುದ್ಧ ವಿಮಾನಗಳು, ಡ್ರೋನ್‌ಗಳು, ಯುದ್ಧ ನೌಕೆಗಳು, ತಟ ರಕ್ಷಣಾ ಪಡೆ ನೌಕೆಗಳನ್ನು ತೈವಾನ್ ಸುತ್ತಲೂ ವೃತ್ತಾಕಾರದಲ್ಲಿ ನಿಯೋಜಿಸಿದೆ. ಹೀಗಾಗಿ ಈಗ ತೈವಾನ್ ಸುತ್ತಲೂ ಚೀನಾ ಇದೆ. ಈ ಮೂಲಕ ಚೀನಾ ಸ್ಪಷ್ಟ ಸಂದೇಶ ನೀಡಿದೆ. ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುತ್ತದೆ ನೋಡಬೇಕಿದೆ.