ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ಈಗಾಗಲೇ ಮಳೆ ಆರಂಭವಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದೇ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೆ. ಇದನ್ನು ನೋಡಿದರೆ ಅಧಿಕಾರಿಗಳು ಮಳೆಗೆ ತಯಾರಿ ನಡೆಸಿಲ್ಲ ಎನ್ನಲಾಗುತ್ತಿದೆ.
ಬೇಸಿಗೆ ಕಾಲದ ಒಂದೇ ಮಳೆಗೆ ಇಡೀ ನಗರದ ರಸ್ತೆಗಳು ನದಿಯಂತ್ತಾಗಿದ್ದವು. ಹೀಗಾಗಿ ಮಳೆಗಾಲ ಬಂದ್ರೆ ಜನರಿಗೆ ತೊಂದರೆ ಗ್ಯಾರಂಟಿ. ಮಳೆಗಾಲ ಎದುರಿಸಲು ಬಿಬಿಎಂಪಿ ಕಿಂಚಿತ್ತೂ ಸಿದ್ದವಾಗಿಲ್ಲ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರಕ್ಕೆ ಈ ಬಾರಿಯೂ ಗಂಡಾಂತರ ಕಾದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಮಳೆಯಿಂದಾಗಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಿಂದಾಗಿ ಇಡೀ ದೇಶದಾದ್ಯಂತ ಬೆಂಗಳೂರು ಸದ್ದು ಮಾಡಿತ್ತು. ಈಗ ಆ ಗತವೈಭವ ಮತ್ತೆ ಮರುಕಳಿಸುವ ಸಾಧ್ಯತೆ ಇದೆ. ಕೇವಲ ಮಳೆ ಬಂದಗ ಮಾತ್ರ ಒತ್ತುವರಿ ತೆರವು, ರಾಜಕಾಲುವೆ ಹೂಳು ತೆರವು ಅಂತ ಅಧಿಕಾರಿಗಳು ಕಥೆ ಹೇಳುತ್ತಾರೆ. ಆದರೆ, ಮಳೆ ನಿಂತ ಮೇಲೆ ಅದೇ ರಾಗ, ಅದೇ ಹಾಡು ಎನ್ನುವಂತೆ ಅಧಿಕಾರಿಗಳ ಕಾರ್ಯವೈಖರಿ ಇದೆ. ಮಳೆಯ ಹೆಸರಿನಲ್ಲಿ ಕೋಟಿ ಕೋಟಿ ಹಣ ಬಿಡುಗಡೆಯಾಗುತ್ತದೆ. ಆದರೆ, ಕೊಟ್ಟ ಹಣಕ್ಕೆ ಲೆಕ್ಕ ಸಿಗುತ್ತಿದೆಯೇ ಹೊರತು, ಬೆಲೆ ಸಿಗುತ್ತಿಲ್ಲ, ಜನರಿಗೆ ನೆಮ್ಮದಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಮಳೆಗಾಲಕ್ಕೂ ಮುನ್ನ ಬಿಬಿಎಂಪಿ ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು?
- ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು.
- ರಾಜಕಾಲುವೆ ಹೂಳು ತೆಗೆದು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು
- ಮಳೆಗಾಲಕ್ಕೆ ಮೊದಲೇ ಒಣಗಿದ ಮರ ತೆರವು ಮಾಡಬೇಕು
- ಮಳೆ ಹಾನಿಯಾಗುವ ಸೂಕ್ಷ್ಮ ಪ್ರದೇಶ ಪಟ್ಟಿ ಮಾಡಿ ನೆರೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು
- ಕಳೆದ ಬಾರಿ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಒತ್ತುವರಿ ತೆರವು ಮಾಡಬೇಕು
- ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಟಾಸ್ಕ್ ಫೋರ್ಸ್ ನೇಮಿಸಬೇಕು
- ಪ್ರತಿ ವಲಯದಲ್ಲಿ ಕಂಟ್ರೋಲ್ ರೂಮ್ ತೆರದು ಸಾರ್ವಜನಿಕರ ಸಮಸ್ಯೆ ಅಲಿಸಬೇಕು
- ಮಳೆಗಾಲಕ್ಕೂ ಮುನ್ನ ರಸ್ತೆ ಕಾಮಗಾರಿಗಳನ್ನು ಪೂರ್ಣ ಮಾಡಬೇಕು
- ಮಳೆಗಾಲಕ್ಕೆ ಅಂತ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಬೇಕು
- ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲದ ಅವಘಡಕ್ಕೆ ಕಾರ್ಯ ನಿರ್ವಹಿಸಲು ಕೇವಲ 24 ತಂಡ ಇದ್ದು, ಹೆಚ್ಚಿಸಬೇಕು.
- ಮಳೆ ನೀರು ಹೊರ ಹಾಕಲು ಜನರೇಟರ್, ಮರ ಕಟ್ಟಿಂಗ್ ಯಂತ್ರ, ಪಂಪ್, ಟ್ಟಿಪ್ಪರ್ ಸೇರಿದಂತೆ ಇನ್ನೂ ಇತರೆ ಪರಿಕರ ಉಪಕರಣ ಖರೀದಿ ಮಾಡಬೇಕು.
- ಮಳೆಗಾಲಕ್ಕೂ ಮುನ್ನವೇ ಟೆಂಡರ್ ಕರೆದು ಸಮರ್ಪಕ ರೀತಿಯಲ್ಲಿ ಸಿದ್ದತೆ ಮಾಡಿಕೊಳ್ಳಬೇಕು. ಆದರೆ, ಮಳೆಗಾಲ ಸಮೀಪಿಸಿದರೂ ಅಧಿಕಾರಿಗಳು ಈ ರೀತಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯವು ಜನರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಮಾತ್ರ ಶತಸಿದ್ಧ ಎನ್ನಲಾಗುತ್ತಿದೆ.