ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಲ್ತ್ ಇನ್ಸ್ ಪೆಕ್ಟರ್ ಗಳಿಗೆ ಕಳೆದ 8 ತಿಂಗಳುಗಳಿಂದ ವೇತನ ನೀಡಿಲ್ಲ ಎನ್ನಲಾಗಿದೆ.
ವೇತನ ನೀಡುವಷ್ಟೂ ಹಣ ಬಿಬಿಎಂಪಿ ಬಳಿ ಇಲ್ವಾ? ಎಂಬ ಸಂಶಯ ಕಾಡುತ್ತಿದೆ. ಕಳೆದ 8 ತಿಂಗಳುಗಳಿಂದ ಸುಮಾರು 212 ಜನ ಜೂನಿಯರ್ ಹೆಲ್ತ್ ಇನ್ ಸ್ಪೆಕ್ಟರ್ ಗಳಿಗೆ ವೇತನ ನೀಡಿಲ್ಲ ಎನ್ನಲಾಗಿದೆ. ಎರಡು ಖಾಸಗಿ ಏಜೆನ್ಸಿಗಳಿಂದ 212 ಜನ ಹೆಲ್ತ್ ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು.
ಈ ಸಿಬ್ಬಂದಿ ಬಿಬಿಎಂಪಿ ವ್ಯಾಪ್ತಿಯ ಪೌರಕಾರ್ಮಿಕರ ಹಾಜರಾತಿ, ಶಾಲೆ ಬಿಟ್ಟ ಮಕ್ಕಳ ಸರ್ವೇ ಕಾರ್ಯ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸರ್ವೇ ಸೇರಿದಂತೆ ಇನ್ನಿತರ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಏಜೆನ್ಸಿಗಳಿಗೆ ಕಳೆದ 8 ತಿಂಗುಳುಗಳಿಂದ ಹಣ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ವೇತನ ಕೇಳಿದರೆ ಹಿರಿಯ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ ಎನ್ನಲಾಗಿದೆ. ಸಂಬಳ ಬೇಕು ಅಂದ್ರೆ, ಕೆಲಸ ಬಿಟ್ಟು ಮನೆಗೆ ಹೋಗು ಅಂತಾ ಅವಾಜ್ ಹಾಕುತ್ತಿದ್ದಾರೆ ಎಂದು ಸಿಬ್ಬಂದಿ ಆರೋಪಿಸುತ್ತಿದ್ದಾರೆ.
ಗುತ್ತಿಗೆ ಅಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ವೇತನ ನೀಡುವುದಿಲ್ಲವಾ? ಅಥವಾ ವೇತನ ನೀಡುವುದಕ್ಕೆ ಪಾಲಿಕೆಯಲ್ಲಿ ಹಣ ಇಲ್ವಾ? ಬ್ರಾಂಡ್ ಬೆಂಗಳೂರು ನಿರ್ಮಾಪಕ ಡಿಸಿಎಂಗೆ ಈ ವಿಷಯ ಗೊತ್ತಿಲ್ವಾ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.