ಬೆಂಗಳೂರು: ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಇಂದಿನಿಂದ ಕಸ ಸಾಗಿಸುವ ಬಿಬಿಎಂಪಿ ಲಾರಿ, ಆಟೋ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನಗರದ ಜನರಿಗೆ ಕಸದ ಸಂಕಷ್ಟ ಶುರುವಾಗಿದೆ.
ಇಂದಿನಿಂದ ಕೆಲಸ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಸ ಸಾಗಿಸುವ ಆಟೋ, ಲಾರಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಕಸ ಸಂಗ್ರಹಿಸುವ ಆಟೋಗಳು, ಲಾರಿಗಳ ಸಂಚಾರ್ ಬಂದ್ ಆಗಿರುತ್ತವೆ. ಸುಮಾರು 5 ಸಾವಿರ ಆಟೋ ಚಾಲಕರು ಹೋರಾಟಕ್ಕೆ ಮುಂದಾಗಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ಆಮರಣಾಂತ ಉಪವಾಸಕ್ಕೆ ಚಾಲಕರು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಹಲವು ಸಂಘಟನೆಗಳು ಕೂಡ ಬೆಂಬಲ ನೀಡಿವೆ. ಹೀಗಾಗಿ 700 ಕಸದ ಲಾರಿಗಳು, 2 ಸಾವಿರ ಕಸದ ಆಟೋ ಸೇವೆ ರಸ್ತೆಗೆ ಇಳಿಯುವುದಿಲ್ಲ. ಇದರಿಂದಾಗಿ ಬೆಂಗಳೂರು ಗಬ್ಬೆದ್ದು ನಾರಲಿದೆಯೇ? ಎಂಬ ಆತಂಕ ಕಾಡುತ್ತಿದೆ.
ರಾಜಧಾನಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಹೆಚ್ಚಾಗಿದೆ. ಇಷ್ಟೊಂದು ಕಸದ ವಾಹನಗಳಿದ್ದರೂ ಎಲ್ಲೆಂದರಲ್ಲಿ ಕಸ ಬಿದ್ದು ಜನ ರೋಸಿ ಹೋಗುತ್ತಿದ್ದಾರೆ. ಗಲ್ಲಿ ಗಲ್ಲಿಯಲ್ಲೂ ಕಸ ನಿರ್ವಹಣೆಯ ಸಮಸ್ಯೆ ಇದೆ. ಇದರ ಮಧ್ಯೆ ಪ್ರತಿಭಟನೆ ನಡೆಸುವ ನಿರ್ಧಾರದಿಂದಾಗಿ ಕಸದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕಳೆದ ಬಾರಿ ಪ್ರತಿಭಟನೆ ನಡೆಸಿದ್ದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನಿಡಿದ್ದರು. ಆದರೆ, ಇಂದಿಗೂ ಸಮಸ್ಯೆ ಬಗೆಹರಿದಿಲ್ಲ ಎಂದು ಪ್ರತಿಭಟನೆಗೆ ಚಾಲಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಚಾಲಕರ ಬೇಡಿಕೆಗಳೇನು?
ಐಪಿಡಿ ಸಾಲಪ್ಪ ವರದಿ ಜಾರಿಗೊಳಿಸಬೇಕು.
ಘನತ್ಯಾಜ್ಯ ವಿಲೇವಾರಿ ಮಾಡುವ ಚಾಲಕರ ಸೇವೆ ಖಾಯಂ ಮಾಡಬೇಕು.
ಚಾಲಕರು, ಸಹಾಯಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು.
2023ರಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಚಾಲಕರನ್ನ ಖಾಯಂ ಮಾಡಬೇಕು.
ಹೊರಗುತ್ತಿಗೆ ಕಾರ್ಮಿಕರನ್ನು ನೇರವೇತನಕ್ಕೆ ಪರಿಗಣಿಸಬೇಕು.