ರಿಯಾದ್/ವಾಷಿಂಗ್ಟನ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಇರಾನ್ ನಡೆಸಿದ ಭೀಕರ ಡ್ರೋನ್ ದಾಳಿಯ ಆಘಾತಕಾರಿ ವಿವರಗಳು ಹೊರಬಿದ್ದಿವೆ. ರಾಯಭಾರ ಕಚೇರಿಯ ಒಳಭಾಗದಲ್ಲಿದ್ದ ಅಮೆರಿಕದ ಗುಪ್ತಚರ ಸಂಸ್ಥೆ ‘ಸಿಐಎ’ (CIA) ವಿಭಾಗವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಕೇವಲ 60 ಸೆಕೆಂಡುಗಳ ಅಂತರದಲ್ಲಿ ಎರಗಿದ ಎರಡು ಡ್ರೋನ್‌ಗಳು ಅತ್ಯಂತ ಸುರಕ್ಷಿತ ವಲಯವೆಂದು ಪರಿಗಣಿಸಲಾದ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿ ಅಮೆರಿಕದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.
ಮಾರ್ಚ್ 3ರಂದು ನಡೆದ ಈ ಘಟನೆಯ ವಿಡಿಯೋವನ್ನು ಈಗ ಇರಾನ್ ಬಹಿರಂಗಪಡಿಸಿದೆ. ಅಂದು ಮಧ್ಯರಾತ್ರಿ 1:30ಕ್ಕೆ ಮೊದಲ ಇರಾನಿ ಡ್ರೋನ್ ರಿಯಾದ್‌ನ ರಾಯಭಾರ ಕಚೇರಿಗೆ ಅಪ್ಪಳಿಸಿತು. ಅದು ಕಟ್ಟಡಕ್ಕೆ ದೊಡ್ಡ ರಂಧ್ರವನ್ನು ಮಾಡಿದ ಸರಿಯಾಗಿ ಒಂದು ನಿಮಿಷದ ನಂತರ, ಎರಡನೇ ಡ್ರೋನ್ ಅದೇ ರಂಧ್ರದ ಮೂಲಕ ಒಳಗೆ ನುಗ್ಗಿ ಸ್ಫೋಟಗೊಂಡಿತು. ಈ ಸ್ಫೋಟದ ತೀವ್ರತೆಗೆ ರಾಯಭಾರ ಕಚೇರಿಯ ಮೂರು ಮಹಡಿಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಸಿಐಎ ಕೇಂದ್ರ ಕಚೇರಿ ಸಂಪೂರ್ಣ ಜಖಂಗೊಂಡಿತು. ಸೌದಿ ರಕ್ಷಣಾ ಸಚಿವಾಲಯವು ಹಾನಿ ಸಣ್ಣ ಪ್ರಮಾಣದ್ದು ಎಂದು ಹೇಳಿದೆಯಾದರೂ, ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ ಕಟ್ಟಡದ ಕೆಲವು ಭಾಗಗಳು ಸರಿಪಡಿಸಲಾಗದಷ್ಟು ಹಾನಿಗೀಡಾಗಿವೆ.
ಅಮೆರಿಕದ ಭದ್ರತಾ ಲೋಪ
ವಿಶ್ವದಾದ್ಯಂತ ಇರುವ ಹೆಚ್ಚಿನ ಅಮೆರಿಕನ್ ರಾಯಭಾರ ಕಚೇರಿಗಳಂತೆ ರಿಯಾದ್‌ನಲ್ಲಿರುವ ಕಚೇರಿಯೂ ತನ್ನದೇ ಆದ ಸ್ವತಂತ್ರ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿಲ್ಲ. ಇದು ರಕ್ಷಣೆಗಾಗಿ ಸಂಪೂರ್ಣವಾಗಿ ಆತಿಥೇಯ ರಾಷ್ಟ್ರವಾದ ಸೌದಿ ಅರೇಬಿಯಾವನ್ನು ಅವಲಂಬಿಸಿದೆ. ಸೌದಿ ಮಿಲಿಟರಿಯು ಹತ್ತಿರದ ಅರಮನೆಯನ್ನು ರಕ್ಷಿಸಲು ಬಳಸುವ ‘ಪೇಟ್ರಿಯಾಟ್’ (Patriot) ಕ್ಷಿಪಣಿ ನಿರೋಧಕ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಈ ರಾಯಭಾರ ಕಚೇರಿ ಇದ್ದರೂ, ಇರಾನ್‌ನ ಡ್ರೋನ್‌ಗಳು ಆ ವ್ಯವಸ್ಥೆಯ ಕಣ್ಣು ತಪ್ಪಿಸಿ ದಾಳಿ ಮಾಡುವಲ್ಲಿ ಯಶಸ್ವಿಯಾಗಿವೆ. ದಾಳಿಯು ಕಚೇರಿಯ ಸಮಯದ ನಂತರ ನಡೆದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.
ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷದಲ್ಲಿ ಇರಾನ್ ಕೇವಲ ರಿಯಾದ್ ಮಾತ್ರವಲ್ಲದೆ ಬಾಗ್ದಾದ್, ದುಬೈ, ಕುವೈತ್ ಮತ್ತು ಎರ್ಬಿಲ್‌ನಲ್ಲಿರುವ ಅಮೆರಿಕನ್ ರಾಯಭಾರ ಕಚೇರಿಗಳನ್ನೂ ಗುರಿಯಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ, ರಿಯಾದ್‌ನ ಪ್ರಿನ್ಸ್ ಸುಲ್ತಾನ್ ವಾಯು ನೆಲೆಯ ಮೇಲೂ ದಾಳಿ ನಡೆದಿದ್ದು, ಅಮೆರಿಕದ ಇ-3 ಅವಾಕ್ಸ್ (E-3 AWACS) ರೇಡಾರ್ ವಿಮಾನಗಳು ಮತ್ತು ಇಂಧನ ಟ್ಯಾಂಕರ್‌ಗಳು ಜಖಂಗೊಂಡಿವೆ. ಈವರೆಗಿನ ದಾಳಿಗಳಲ್ಲಿ ಏಳು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ : ಇರಾನ್ ಗಡಿಯೊಳಗೆ ನುಗ್ಗಿ ಅಮೆರಿಕದ ಸಾಹಸಮಯ ಕಾರ್ಯಾಚರಣೆ : ಎಫ್-15 ಯುದ್ಧ ವಿಮಾನದ ಪೈಲಟ್ ರಕ್ಷಣೆ!



















