ಜೆರುಸಲೇಂ: ಮಧ್ಯಪ್ರಾಚ್ಯದಲ್ಲಿನ ಯುದ್ಧ ದಿನೇ ದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇಸ್ರೇಲ್‌ನ ಪ್ರಮುಖ ಅಣುಶಕ್ತಿ ಕೇಂದ್ರವಿರುವ ದಿಮೋನಾ ನಗರವನ್ನು ಗುರಿಯಾಗಿಸಿಕೊಂಡು ಇರಾನ್ ಭೀಕರ ದಾಳಿ ನಡೆಸಿದೆ. ಇತ್ತೀಚೆಗೆ ತನ್ನ ಮೇಲೆ ನಡೆದ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ‘ಪ್ರತೀಕಾರದ ಕ್ರಮ’ ಇದಾಗಿದೆ ಎಂದು ಇರಾನ್ ಘೋಷಿಸಿದೆ. ಈ ಕ್ಷಿಪಣಿ ದಾಳಿಯು ಇಸ್ರೇಲ್‌ನ ಅತ್ಯಂತ ಸುರಕ್ಷಿತ ವಲಯಗಳಲ್ಲಿ ಒಂದಾದ ನೆಗೆವ್ ಮರುಭೂಮಿಯ ಪ್ರದೇಶವನ್ನು ನಡುಗಿಸಿದೆ.
ನೂರಕ್ಕೂ ಹೆಚ್ಚು ಮಂದಿಗೆ ಗಾಯ
ಪ್ರಾಥಮಿಕ ವರದಿಗಳ ಪ್ರಕಾರ, ದಿಮೋನಾ ಮತ್ತು ಸಮೀಪದ ಅರಾದ್ ಪಟ್ಟಣಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ದಾಳಿಯ ತೀವ್ರತೆಗೆ ಹಲವು ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇಸ್ರೇಲ್‌ನ ಅತ್ಯಾಧುನಿಕ ಕ್ಷಿಪಣಿ ನಿಗ್ರಹ ವ್ಯವಸ್ಥೆಗಳು ಕೆಲವು ಕ್ಷಿಪಣಿಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, ಕೆಲವು ಕ್ಷಿಪಣಿಗಳು ಜನವಸತಿ ಮತ್ತು ಆಯಕಟ್ಟಿನ ಜಾಗಗಳಿಗೆ ಅಪ್ಪಳಿಸಿವೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕ
ಅಣುಶಕ್ತಿ ಕೇಂದ್ರದ ಸಮೀಪವೇ ಈ ದಾಳಿ ನಡೆದಿರುವುದು ಇಡೀ ಜಗತ್ತನ್ನು ಆತಂಕಕ್ಕೆ ತಳ್ಳಿದೆ. ವಿಕಿರಣ ಸೋರಿಕೆಯಂತಹ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಇಸ್ರೇಲ್ ಮೂಲಗಳು ಸದ್ಯಕ್ಕೆ ತಿಳಿಸಿದ್ದರೂ, ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ಹೇಳಳಾಗಿದೆ. ಈ ಬೆಳವಣಿಗೆಯಿಂದಾಗಿ ಜಾಗತಿಕ ತೈಲ ಮಾರುಕಟ್ಟೆ ಮತ್ತು ರಾಜತಾಂತ್ರಿಕ ವಲಯಗಳಲ್ಲಿ ತಲ್ಲಣ ಶುರುವಾಗಿದ್ದು, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇಸ್ರೇಲ್ ಮುಂದಿನ ನಡೆಯೇನು?
ತನ್ನ ಅಣುಶಕ್ತಿ ಕೇಂದ್ರದ ಮೇಲೆ ನಡೆದ ಈ ದಾಳಿಯನ್ನು ಇಸ್ರೇಲ್ ಗಂಭೀರವಾಗಿ ಪರಿಗಣಿಸಿದ್ದು, ಇದಕ್ಕೆ ತಕ್ಕ ಪ್ರಾಯಶ್ಚಿತ್ತವನ್ನು ಇರಾನ್ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಇಸ್ರೇಲ್ ರಕ್ಷಣಾ ಪಡೆಗಳು ಈಗಾಗಲೇ ಪ್ರಬಲ ಪ್ರತಿ ದಾಳಿಗೆ ಸಜ್ಜಾಗುತ್ತಿವೆ ಎಂಬ ಸುಳಿವು ಸಿಕ್ಕಿದ್ದು, ಈ ಸಂಘರ್ಷವು ಪೂರ್ಣ ಪ್ರಮಾಣದ ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಭೀತಿ ಎದುರಾಗಿದೆ.
ಇದನ್ನೂ ಓದಿ : ರಂಜಾನ್ ಹಬ್ಬದಂದೇ ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ!



















