ಟೆಹ್ರಾನ್: ಕುಸಿಯುತ್ತಿರುವ ಆರ್ಥಿಕತೆ, ಹಣದುಬ್ಬರ, ಬೆಲೆ ಏರಿಕೆಯಂಥ ಸಂಕಷ್ಟದಿಂದ ರೋಸಿ ಹೋಗಿರುವ ಇರಾನ್ ಜನತೆ, ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ವಿರುದ್ಧ ಸಿಡಿದೆದ್ದಿದ್ದಾರೆ. ಕಳೆದ ಮೂರು ವರ್ಷಗಳಲ್ಲೇ ಅತಿದೊಡ್ಡ ಪ್ರತಿಭಟನೆಗೆ ಇರಾನ್ ಸಾಕ್ಷಿಯಾಗಿದ್ದು, ಹಿಂಸಾಚಾರಕ್ಕೆ ಕನಿಷ್ಠ 7 ಜನರು ಬಲಿಯಾಗಿದ್ದಾರೆ.
ಹೊಸ ವರ್ಷದ ಆರಂಭದೊಂದಿಗೆ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ನಗರ ಪ್ರದೇಶಗಳಿಂದ ಹಳ್ಳಿಗಳಿಗೂ ಪ್ರತಿಭಟನೆ ವ್ಯಾಪಿಸಿದೆ. ಲೋರ್ಡೆಗಾನ್, ಕುಹ್ದಾಶ್ ಮತ್ತು ಇಸ್ಫಹಾನ್ ಪ್ರಾಂತ್ಯಗಳಲ್ಲಿ ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ಭಾರೀ ಘರ್ಷಣೆಗಳು ನಡೆದಿವೆ.
ಪ್ರತಿಭಟನೆಗೆ ಕಾರಣವೇನು?
ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳು ಮತ್ತು ಇತ್ತೀಚೆಗೆ ಇಸ್ರೇಲ್-ಅಮೆರಿಕ ನಡೆಸಿದ ವೈಮಾನಿಕ ದಾಳಿಗಳಿಂದ ಇರಾನ್ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇರಾನ್‌ನ ಕರೆನ್ಸಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, ಡಿಸೆಂಬರ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ.42.5ಕ್ಕೆ ತಲುಪಿದೆ. ಇದರಿಂದಾಗಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಮತ್ತು ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಸರ್ವಾಧಿಕಾರಿಗೆ ಧಿಕ್ಕಾರ
ರಾಜಧಾನಿ ಟೆಹ್ರಾನ್‌ನಲ್ಲಿ ಬೀದಿಗಿಳಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು “ಸರ್ವಾಧಿಕಾರಿಗೆ ಸಾವು” (Death to the dictator) ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪದಚ್ಯುತಗೊಂಡಿದ್ದ ಷಾ ಮೊಹಮ್ಮದ್ ಅವರ ಪುತ್ರ ರೆಜಾ ಪಹ್ಲವಿ ಪರವಾಗಿಯೂ ಘೋಷಣೆಗಳು ಕೇಳಿಬಂದಿವೆ. ಅಮೆರಿಕದಲ್ಲಿ ನೆಲೆಸಿರುವ ರೆಜಾ ಪಹ್ಲವಿ, “ನಾನು ನಿಮ್ಮೊಂದಿಗಿದ್ದೇನೆ, ವಿಜಯ ನಮ್ಮದೇ” ಎಂದು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ.
ಹಿಂಸಾಚಾರ ಮತ್ತು ಸಾವು
ಲೋರ್ಡೆಗಾನ್ ಎಂಬಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕುಹ್ದಾಶ್‌ನಲ್ಲಿ ಭದ್ರತಾ ಪಡೆಯ ಅರೆಸೇನಾ ಘಟಕದ ಸದಸ್ಯನೊಬ್ಬ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಇಸ್ಫಹಾನ್ ನಲ್ಲಿ ಒಬ್ಬ ಪ್ರತಿಭಟನಾಕಾರನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಹಕ್ಕುಗಳ ಗುಂಪು ‘ಹೆಂಗಾವ್’ ವರದಿ ಮಾಡಿದೆ.
ಸರ್ಕಾರವು ಒಂದೆಡೆ ಮಾತುಕತೆಯ ಪ್ರಸ್ತಾಪ ಇಟ್ಟಿದ್ದರೂ, ಮತ್ತೊಂದೆಡೆ ಕಠಿಣ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಶೀತ ಹವಾಮಾನದ ನೆಪವೊಡ್ಡಿ ಸರ್ಕಾರ ರಜೆ ಘೋಷಿಸಿದ್ದರೂ, ಜನರು ಪ್ರತಿಭಟನೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು



















