ಮಸ್ಕತ್ | ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆಗೆ ಪ್ರತಿಯಾಗಿ ಒಮಾನ್ ಕರಾವಳಿಯಲ್ಲಿ ಸಂಚರಿಸುವ ತೈಲ ಹಡಗುಗಳ ಮೇಲೆ ದಾಳಿಯನ್ನು ಇರಾನ್ ಮುಂದುವರಿಸಿದೆ. ಇದೀಗ ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ ಧ್ವಜದೊಂದಿಗೆ ಸಂಚರಿಸಿತ್ತಿದ್ದ ತೈಲ ಹಡಗಿನ (ಟ್ಯಾಂಕರ್) MKD VYOM ಮೇಲೆ ಮಾನವರಹಿತ ಡ್ರೋನ್ ದಾಳಿ ನಡೆಸಿದ್ದು ದುರ್ಘಟನೆಯಲ್ಲಿ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಒಮಾನಿ ಕಡಲ ಭದ್ರತಾ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಮಸ್ಕತ್ ಗವರ್ನರೇಟ್ ಕರಾವಳಿಯಿಂದ 52 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಈ ದಾಳಿ ನಡೆದಿದ್ದು, ಟ್ಯಾಂಕರ್ ಸುಮಾರು 59,463 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸುತ್ತಿತ್ತು. ದಾಳಿಯ ಪರಿಣಾಮವಾಗಿ ಮುಖ್ಯ ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದ ಪರಿಣಾಮ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆದರೆ ಹೆಸರು ಸೇರಿದಂತೆ ಯಾವುದೇ ವಿವರಗಳು ಈವರೆಗೂ ಬಹಿರಂಗವಾಗಿಲ್ಲ. ಭಾನುವಾರವಷ್ಟೇ ಪಲಾವ್ ಗಣರಾಜ್ಯದ ಧ್ವಜವನ್ನು ಹೊಂದಿದ್ದ ತೈಲ ಹಡಗಿನ ಮೇಲೆ ದಾಳಿ ನಡೆದಿತ್ತು. ಪರಿಣಾಮ ಹಡಗಿಗೆ ಬೆಂಕಿ ಹತ್ತಿಕೊಂಡು ನಾಲ್ವರು ಗಾಯಗೊಂಡಿದ್ದರು. ಅದರಲ್ಲಿದ್ದ 15 ಭಾರತೀಯರೂ ಸೇರಿದಂತೆ ಒಟ್ಟು 20 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದಾದ ಮರುದಿನವೇ ಈ ದಾಳಿ ನಡೆದಿದೆ.
ಇದನ್ನೂ ಓದಿ : ಕೆರೆಯಲ್ಲಿ ಈಜಲು ಹೋದ ಯುವಕ ಸಾವು



















