ನವದೆಹಲಿ: ಟೆಹ್ರಾನ್ನ ಅಣು ಸ್ಥಾವರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದರಿಂದಾಗಿ ವಿಶ್ವದಾದ್ಯಂತ ಹಲವು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಏರ್ಇಂಡಿಯಾದ ಕನಿಷ್ಠ 16 ವಿಮಾನಗಳು ಪಥ ಬದಲಿಸಿದ್ದು, ಈ ಪೈಕಿ ಹಲವು ವಿಮಾನಗಳು ಬೇರೆ ದಾರಿಯಿಲ್ಲದೇ ತಾವು ಹೊರಟಿದ್ದ ವಿಮಾನ ನಿಲ್ದಾಣಕ್ಕೆ ವಾಪಸಾಗಿವೆ.
ನ್ಯೂಯಾರ್ಕ್ನಿಂದ ದೆಹಲಿ, ದೆಹಲಿ, ಮುಂಬೆನಿಂದ ಲಂಡನ್ ಮತ್ತು ನ್ಯೂಯಾರ್ಕ್ಗೆ ಹೊರಟಿದ್ದ ವಿಮಾನಗಳು ಕೂಡ ಇವುಗಳಲ್ಲಿ ಸೇರಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಯಾವೆಲ್ಲ ವಿಮಾನಗಳ ಸಂಚಾರಕ್ಕೆ ತೊಂದರೆ?
AI130 – ಲಂಡನ್ ಹೀಥ್ರೂ- ಮುಂಬೈ ವಿಮಾನ- ವಿಯೆನ್ನಾಗೆ ಮಾರ್ಗ ಬದಲು
AI102 – ನ್ಯೂಯಾರ್ಕ್-ದೆಹಲಿ – ಶಾರ್ಜಾಗೆ ತಿರುಗಿಸಲಾಗಿದೆ
AI116 – ನ್ಯೂಯಾರ್ಕ್-ಮುಂಬೈ –ಜೆಡ್ಡಾಗೆ ಪಥ ಬದಲಿಸಲಾಗಿದೆ
AI2018 – ಲಂಡನ್ ಹೀಥ್ರೂ- ದೆಹಲಿ – ಮುಂಬೈಗೆ ಮಾರ್ಗ ಬದಲು
AI129 – ಮುಂಬೈ-ಲಂಡನ್ ಹೀಥ್ರೂ – ಮುಂಬೈಗೆ ವಾಪಸ್
AI119 – ಮುಂಬೈ-ನ್ಯೂಯಾರ್ಕ್ – ಮುಂಬೈಗೆ ವಾಪಸ್
AI103 – ದೆಹಲಿ-ವಾಷಿಂಗ್ಟನ್ – ದೆಹಲಿಗೆ ವಾಪಸ್
AI106 – ನೆವಾರ್ಕ್- ದೆಹಲಿ – ದೆಹಲಿಗೆ ವಾಪಸ್
AI188 – ವ್ಯಾಂಕೂವರ್-ದೆಹಲಿ – ಜೆಡ್ಡಾಗೆ ಕಳುಹಿಸಲಾಗಿದೆ
AI101 – ದೆಹಲಿ- ನ್ಯೂಯಾರ್ಕ್ – ಫ್ರಾಂಕ್ ಫರ್ಟ್/ಮಿಲಾನ್ಗೆ ತಿರುಗಿಸಲಾಗಿದೆ
AI126 –ಷಿಕಾಗೋ-ದೆಹಲಿ – ಜೆಡ್ಡಾಗೆ ಪಥ ಬದಲು
AI132 – ಲಂಡನ್ ಹೀಥ್ರೂ-ಬೆಂಗಳೂರು– ಶಾರ್ಜಾಗೆ ಮಾರ್ಗ ಬದಲು
AI2016 – ಲಂಡನ್ ಹೀಥ್ರೂ- ದೆಹಲಿ – ವಿಯೆನ್ನಾಗೆ ತಿರುಗಿಸಲಾಗಿದೆ
AI104 –ವಾಷಿಂಗ್ಟನ್-ದೆಹಲಿ –ವಿಯೆನ್ನಾಗೆ ಮಾರ್ಗ ಬದಲು
AI190 – ಟೊರೋಂಟೋ-ದೆಹಲಿ – ಫ್ರಾಂಕ್ಫರ್ಟ್ಗೆ ಪಥ ಬದಲಿಸಲಾಗಿದೆ
AI189 – ದೆಹಲಿ-ಟೊರೊಂಟೋ- ದೆಹಲಿಗೆ ವಾಪಸ್
ಪ್ರಯಾಣಿಕರ ಸುರಕ್ಷತೆ ಮೇರೆಗೆ ಈ ಕ್ರಮ ಕೈಗೊಂಡಿರುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ. ಅಗತ್ಯವಾಗಿ ಸಂಚರಿಸಲೇಬೇಕು ಎಂಬವರಿಗೆ ಪರ್ಯಾಯ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಉಳಿದವರಿಗೆ ಟಿಕೆಟ್ ಹಣ ಮರುಪಾವತಿ ಮಾಡಲಾಗುತ್ತದೆ ಎಂದು ಏರಿಂಡಿಯಾ ತಿಳಿಸಿದೆ.
ಇಂದು ಮುಂಜಾನೆ, ಇರಾನ್ನ ಅಣ್ವಸ್ತ್ರ ಯೋಜನೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ. ಇದು ಮಧ್ಯಪ್ರಾಚ್ಯದ ಎರಡು ಶತ್ರುರಾಷ್ಟ್ರಗಳ ನಡುವೆ ದೊಡ್ಡ ಮಟ್ಟದ ಯುದ್ಧಕ್ಕೆ ನಾಂದಿ ಹಾಡಿದೆ. ಇರಾನ್ನ ಹಲವು ಪ್ರದೇಶಗಳ ಮೇಲೆ ಡ್ರೋನ್ ಗಳು ಅಪ್ಪಳಿಸಿವೆ. 1980ರ ದಶಕದಲ್ಲಿ ಇರಾಕ್ ಜತೆಗಿನ ಯುದ್ಧದ ಬಳಿಕ ಇರಾನ್ ಎದುರಿಸಿದ ಅತಿದೊಡ್ಡ ದಾಳಿ ಇದಾಗಿದೆ.
ಇರಾನ್ ಸೇನಾ ಮುಖ್ಯಸ್ಥ ಸಾವು:
ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ಮುಖ್ಯಸ್ಥ ಅಂದರೆ ಪ್ಯಾರಾಮಿಲಿಟರಿ ರೆವೊಲ್ಯೂಷನರಿ ಗಾರ್ಡ್ನ ಜನರಲ್ ಹೊಸೈನ್ ಸಲಾಮಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರಿ ಸ್ವಾಮ್ಯದ ವಾಹಿನಿ ದೃಢಪಡಿಸಿದೆ. ಅಲ್ಲದೇ ಪ್ರಮುಖ ಸೇನಾಧಿಕಾರಿಗಲು ಮತ್ತು ವಿಜ್ಞಾನಿಗಳು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.