2025 ರ ಐಪಿಎಲ್ ಗೆ ಹೊಸ ನಿಯಮವನ್ನು ಬಿಸಿಸಿಐ ಸೂಚಿಸಿದೆ. ಹಿಂದೆ ಪ್ರತಿ ತಂಡಗಳು ನಾಲ್ಕು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಬಹುದಾಗಿತ್ತು. ಆದರೆ ಮುಂದಿನ ಐಪಿಎಲ್ ಹರಾಜಿಗೂ ಮುನ್ನ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಬಿಸಿಸಿಐ, ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ನಾಲ್ಕರಿಂದ ಐದಕ್ಕೆ ಏರಿಕೆ ಮಾಡಿದೆ.
ಐದರ ನಂತರ ಮತ್ತೋರ್ವ ಆಟಗಾರನನ್ನು ರೈಟ್ ಟು ಮ್ಯಾಚ್ ಅಂದರೆ ಆರ್ ಟಿಎಂ ಆಯ್ಕೆಯ ಮೂಲಕ ಉಳಿಸಿಕೊಳ್ಳಲು ಅನುಮತಿ ನೀಡಿದೆ. ಅಂದರೆ ಪ್ರತಿ ಫ್ರಾಂಚೈಸಿಯೂ ಇದೀಗ ತನ್ನ ತಂಡದಲ್ಲಿ ಒಟ್ಟು 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಆದರೆ ಬಿಸಿಸಿಐ ಇದಕ್ಕೊಂದು ಷರತ್ತು ವಿಧಿಸಿದೆ.
ಅದೆನೆಂದರೆ ಯಾವ ಫ್ರಾಂಚೈಸಿ ಐದು ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯುಸತ್ತದೋ, ಆ ಫ್ರಾಂಚೈಸಿ ಈ ಐದು ಆಟಗಾರರಿಗೆ ಬರೋಬ್ಬರಿ 75 ಕೋಟಿ ರೂ.ಗಳನ್ನು ವ್ಯಯಿಸಬೇಕಿದೆ. ಸದ್ಯದ ಮಾಹಿತಿಯಂತೆ ಪ್ರತಿ ಫ್ರಾಂಚೈಸಿಗೆ ಬಿಸಿಸಿಐನಿಂದ 100 ಕೋಟಿ ರೂ. ಹಣ ಸಿಗುತ್ತಿದೆ. ಈ 100 ಕೋಟಿ ರೂಗಳಲ್ಲಿ ಬರೋಬ್ಬರಿ 75 ಕೋಟಿ ರೂಗಳನ್ನು ಕೇವಲ 5 ಆಟಗಾರರಿಗೆ ನೀಡಬೇಕಿದೆ.
ವರದಿಗಳಂತೆ, ರೈಟ್ ಮ್ಯಾಚ್ ಕಾರ್ಡ್ ಸೇರಿದಂತೆ ಒಟ್ಟು 6 ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ಬಿಸಿಸಿಐ ಉಳಿಸಿಕೊಳ್ಳಬೇಕಾದ ಆಟಗಾರರ ವೇತನದ ಸ್ಲ್ಯಾಬ್ ಅನ್ನು ಸಹ ನಿಗದಿಪಡಿಸಿದೆ. ಅದರಂತೆ ಫ್ರಾಂಚೈಸಿ ತಾನು ಉಳಿಸಿಕೊಳ್ಳಲು ಬಯಸುವ ಮೊದಲ ಆಟಗಾರನಿಗೆ ಬರೋಬ್ಬರಿ 18 ಕೋಟಿ ರೂ. ಗಳನ್ನು ವೇತನವನ್ನಾಗಿ ನೀಡಬೇಕು.
ಎರಡನೇ ಆಟಗಾರನಿಗೆ 14 ಕೋಟಿ ರೂ. ಮತ್ತು ಮೂರನೇ ಆಟಗಾರನಿಗೆ 11 ಕೋಟಿ ರೂ. ನೀಡಬೇಕು. ನಾಲ್ಕನೇ ಮತ್ತು ಐದನೇ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲು ಬಯಸಿದರೆ ಅದು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ, ಫ್ರಾಂಚೈಸಿ ಉಳಿಸಿಕೊಳ್ಳುವ 4ನೇ ಆಟಗಾರನಿಗೆ ಮೊದಲ ಆಟಗಾರನಂತೆ 18 ಕೋಟಿ ರೂಗಳನ್ನು ನೀಡಬೇಕು. ಹಾಗೆಯೇ ಫ್ರಾಂಚೈಸಿ ಉಳಿಸಿಕೊಳ್ಳಲು ಬಯಸುವ ಐದನೇ ಆಟಗಾರನಿಗೂ 14 ಕೋಟಿ ರೂ. ವೇತನ ನೀಡಬೇಕು ಎಂಬ ನಿಯಮ ಸೂಚಿಸಿದೆ.
ಈ ಬಾರಿಯ ಆಡಳಿತ ಮಂಡಳಿಯು ಫ್ರಾಂಚೈಸಿಯ ಪರ್ಸ್ ಗಾತ್ರದಲ್ಲೂ ಸಹ ಹೆಚ್ಚಳ ಮಾಡಿದೆ. ಅದರಂತೆ ಮುಂದಿನ ಆವೃತ್ತಿಯಿಂದ ಪ್ರತಿಯೊಂದು ಫ್ರಾಂಚೈಸಿಗಳ ಪರ್ಸ್ ಗಾತ್ರ 100 ಕೋಟಿಯಿಂದ 120 ಕೋಟಿಗೆ ಹೆಚ್ಚಳವಾಗಲಿದೆ.