ಐಪಿಎಲ್ 2025ರ ಸೀಸನ್‌ನಲ್ಲಿ ಮೊದಲ ಬಾರಿಗೆ ನಿಧಾನ ಓವರ್ ರೇಟ್‌ನ ಕಾರಣಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ ಭಾರೀ ದಂಡ ವಿಧಿಸಲಾಗಿದೆ. ಶನಿವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ನಿರ್ದಿಷ್ಟ ಸಮಯದಲ್ಲಿ ಎಲ್ಲಾ ಓವರ್‌ಗಳನ್ನು ಮುಕ್ತಾಯಗೊಳಿಸದ ಕಾರಣ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ತಂಡದ ಈ ಸೀಸನ್‌ನ ಮೊದಲ ತಪ್ಪಾಗಿದ್ದು, ಐಪಿಎಲ್ ನಿಯಮಾವಳಿಯ 2.2 ನೇ ವಿಧಿಯ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಐಪಿಎಲ್ 2025ರ ಮೊದಲ ನಿಧಾನ ಓವರ್ ರೇಟ್ ದಂಡ
ಈ ವಿಷಯದ ಬಗ್ಗೆ ಐಪಿಎಲ್ ಪ್ರಕಟಣೆಯಲ್ಲಿ, “ಐಪಿಎಲ್ ನಿಯಮಾವಳಿಯ 2.2 ವಿಧಿಯ ಪ್ರಕಾರ ಕನಿಷ್ಠ ಓವರ್ ರೇಟ್ ನಿರ್ವಹಣೆ ತಪ್ಪು ಮಾಡಿರುವ ಹಾರ್ದಿಕ್ ಪಾಂಡ್ಯಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ,” ಎಂದು ತಿಳಿಸಲಾಗಿದೆ. ಇದೊಂದು ಐಪಿಎಲ್ 2025ರ ಸೀಸನ್‌ನಲ್ಲಿ ತಂಡದ ನಾಯಕರೊಬ್ಬರಿಗೆ ವಿಧಿಸಲಾಗಿರುವ ಮೊದಲ ನಿಧಾನ ಓವರ್ ರೇಟ್ ದಂಡವಾಗಿದೆ.
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 36 ರನ್‌ಗಳ ಸೋಲು ಅನುಭವಿಸಿತು. ಗುಜರಾತ್ ಟೈಟನ್ಸ್ ಪರವಾಗಿ ಸಾಯಿ ಸುದರ್ಶನ್ ಅವರು ಕೇವಲ 41 ಎಸೆತಗಳಲ್ಲಿ 63 ರನ್ ಬಾರಿಸಿದರು. ನಂತರ ವೇಗಿ ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್‌ಗಳನ್ನು ಪಡೆದು ಮುಂಬೈ ತಂಡವನ್ನು 6 ವಿಕೆಟ್ಗೆ 160 ರನ್ಗಳಿಗೆ ಸೀಮಿತಗೊಳಿಸಿದರು. ಈ ಮೂಲಕ ಟೈಟನ್ಸ್ ಈ ಸೀಸನ್‌ನ ತಮ್ಮ ಮೊದಲ ಜಯ ದಾಖಲಿಸಿತು.
ಪಾಂಡ್ಯಗೆ ಹಿಂದೆಯೂ ದಂಡದ ಶಿಕ್ಷೆ
ಹಾರ್ದಿಕ್ ಪಾಂಡ್ಯ, ಕಳೆದ ಸೀಸನ್‌ನ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ನಿಧಾನ ಓವರ್ ರೇಟ್ ಉಲ್ಲಂಘನೆಯ ಕಾರಣ 2025ರ ಮೊದಲ ಪಂದ್ಯವಾದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೆ ಆಟವಾಡಲಿಲ್ಲ. ಆ ಪಂದ್ಯದಲ್ಲೂ ಮುಂಬೈ ಸೋಲನುಭವಿಸಿತ್ತು.
ಪಾಂಡ್ಯ ಪ್ರತಿಕ್ರಿಯೆ
ಪ್ರದರ್ಶನದ ಕುರಿತು ಹಾರ್ದಿಕ್ ಪಾಂಡ್ಯ ಮಾತನಾಡುತ್ತಾ, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ನಾವು 15-20 ರನ್‌ಗಳಷ್ಟು ಕೊರಗೆ ಅನುಭವಿಸಿದೆವು. ಫೀಲ್ಡಿಂಗ್‌ನಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದ್ದು ಸೋಲಿಗೆ ಕಾರಣವಾಯಿತು. ಟಿ20 ಪಂದ್ಯದಲ್ಲಿ ಇದು ದೊಡ್ಡ ವ್ಯತ್ಯಾಸ ಉಂಟುಮಾಡಬಹುದು. ಟೈಟನ್ಸ್ ಆಟಗಾರರು ಅತ್ಯುತ್ತಮವಾಗಿ ಆಟವಾಡಿದರು, ಅವರ ಆಟದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳದೆ ರನ್ ಗಳಿಸುವ ಶಕ್ತಿ ಸ್ಪಷ್ಟವಾಗಿತ್ತು,” ಎಂದು ತಿಳಿಸಿದ್ದಾರೆ.
ಮುಂಬೈಗೆ ಮುಂದೆ ಕೆಕೆಆರ್ ಸವಾಲು
ಈಗಾಗಲೇ ಐಪಿಎಲ್ ಪಾಯಿಂಟ್ ಟೇಬಲ್‌ನಲ್ಲಿ ಒಂದು ಗೆಲುವು ಕೂಡಾ ಇಲ್ಲದೆ ಒಂಬತ್ತನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್, ಮುಂದಿನ ಪಂದ್ಯದಲ್ಲಿ ಸೋಮವಾರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿದೆ.