ರಾಂಚಿ: ಐದು ಐಪಿಎಲ್ ಟ್ರೋಫಿಗಳ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni:) ಮುಂದಿನ ಆವೃತ್ತಿಗೆ ಅಭ್ಯಾಸ ಆರಂಭಿಸಿದ್ದಾರೆ. ಅದಕ್ಕಿಂತ ಮೊದಲು ಅವರು ರಾಂಚಿಯಲ್ಲಿ ‘ಮಾ ದೇವಾರಿ ದೇವಸ್ಥಾನ’ದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂದ ಹಾಗೆ ಐಪಿಎಲ್ ಆರಂಭಕ್ಕೆ ಮೊದಲು ಈ ದೇವಸ್ಥಾನಕ್ಕೆ ಭೇಟಿ ನೀಡುವುದು ಧೋನಿಯ ಅಭ್ಯಾಸ.
2025ನೇ ಆವೃತ್ತಿಯ ಐಪಿಎಲ್ ಮಾರ್ಚ್ 23 ರಿಂದ ಆರಂಭವಾಗಲಿದೆ. ಪ್ರತಿ ದಿನ ಸುಮಾರು 4-ರಿಂದ 5 ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಧೋನಿ ಅಭ್ಯಾಸ ವಿಡಿಯೊ ಕೂಡ ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿದೆ. ಆದಾಗ್ಯೂ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವುದಿಲ್ಲ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಧೋನಿ ಈ ಇಂಪ್ಯಾಕ್ಟ್ ಆಟಗಾರನಾಗಿ ಬಂದು ಬ್ಯಾಟ್ ಬೀಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ 2 ಆವೃತ್ತಿಯಲ್ಲಿ ಧೋನಿ ತಂಡಕ್ಕೆ ಪರ್ಯಾಯ ವಿಕೆಟ್ ಕೀಪರ್ ಇಲ್ಲದ ಕಾರಣ ಮೊಣಕಾಲಿಗೆ ನೋವು ನಿವಾರಕ ಪ್ಲಾಸ್ಟರ್ ಕಟ್ಟಿಕೊಂಡು ಕೀಪಿಂಗ್ ನಡೆಸಿದ್ದರು. ಗಾಯದ ಕಾರಣ ಐಪಿಎಲ್‌ಗೂ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಈ ಬಾರಿ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ಈ ಬಾರಿ ಡೆವೋನ್ ಕಾನ್ವೆ ಕಿಪೀಂಗ್ ಮಾಡಬಹುದು.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್ ಅಹ್ಮದ್, ಆರ್. ಅಶ್ವಿನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಖಲೀಲ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಂಬೋಜ್, ಶೇಕ್ ರಶೀದ್, ಮುಕೇಶ್ ಚೌಧರಿ, ದೀಪಕ್ ಹೂಡಾ, ಗುರುಜಪ್ನೀತ್ ಸಿಂಗ್ ,ನಾಥನ್ ಎಲ್ಲಿಸ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.