ಬೆಂಗಳೂರು: ಐಪಿಎಲ್ 2025 ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಿತು. ಜಿಯೊ ಹಾಟ್‌ಸ್ಟಾರ್ ಡಿಜಿಟಲ್ ವೇದಿಕೆಯಲ್ಲಿ ಈ ಪಂದ್ಯವನ್ನು 67.8 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಎಂದು ವರದಿಯಾಗಿದೆ. ಇದು ಈವರೆಗೆ ಯಾವುದೇ ಐಪಿಎಲ್ ಪಂದ್ಯಕ್ಕೆ ದಾಖಲಾಗಿರುವ ಗರಿಷ್ಠ ವೀಕ್ಷಣೆ.
ಈ ಹಿಂದೆ ಫೆಬ್ರವರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ–ಪಾಕಿಸ್ತಾನ ಪಂದ್ಯ 60 ಕೋಟಿ ವೀಕ್ಷಣೆ ದಾಖಲಿಸಿತ್ತು. ಆದರೆ ಈ ಬಾರಿ ಆ ದಾಖಲೆ ಮುರಿದು, ಐಪಿಎಲ್ ಫೈನಲ್ ಅತ್ಯಂತ ಹೆಚ್ಚು ವೀಕ್ಷಿಸಲಾದ ಕ್ರಿಕೆಟ್ ಪಂದ್ಯವಾಗಿದ್ದು, ಭಾರತದ ಡಿಜಿಟಲ್ ಕ್ರೀಡಾ ಪ್ರಸರಣದ ಇತಿಹಾಸದಲ್ಲಿಯೇ ಪ್ರಮುಖ ಮೈಲಿಗಲ್ಲಾಗಿದೆ.
ಪಂದ್ಯ ಆರಂಭವಾಗುತ್ತಿದ್ದಂತೆ ವೀಕ್ಷಣೆ 4.3 ಕೋಟಿ ಇದ್ದು, ಆರ್‌ಸಿಬಿ ಆಟಗಾರ ಫಿಲ್ ಸಾಲ್ಟ್ ಸಿಕ್ಸರ್ ಬಾರಿಸಿದಾಗ ವೀಕ್ಷಣೆ ಹೆಚ್ಚಳವಾಯಿತು. 11ನೇ ಓವರ್‌ಗೆ ವೀಕ್ಷಣೆ 11 ಕೋಟಿಗೆ ತಲುಪಿತು. ವಿರಾಟ್ ಕೊಹ್ಲಿ ಔಟ್ ಆಗುವ ವೇಳೆ ವೀಕ್ಷಣೆ 26.5 ಕೋಟಿ ತಲುಪಿದ್ದು, ಆರ್‌ಸಿಬಿ ಇನ್ನಿಂಗ್ಸ್ ಅಂತ್ಯಕ್ಕೆ 35 ಕೋಟಿ ವೀಕ್ಷಣೆ ದಾಖಲಾಗಿತ್ತು.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್ ಆರಂಭವಾಗುತ್ತಿದ್ದಂತೆ ವೀಕ್ಷಣೆ 37.2 ಕೋಟಿಗೆ ಏರಿತು. ಪ್ರಭಸಿಮ್ರನ್ ಸಿಂಗ್ ಔಟ್ ಆದಾಗ ವೀಕ್ಷಣೆ 50 ಕೋಟಿಗೆ ಹತ್ತಿರವಾಯಿತು. ಪಂದ್ಯವು ಕುತೂಹಲಕರ ಹಂತ ತಲುಪಿದಂತೆ, 14ನೇ ಓವರ್ ನಂತರ ವೀಕ್ಷಣೆ 55 ಕೋಟಿಗೂ, ಆರ್‌ಸಿಬಿ ಗೆಲುವಿನ ಹತ್ತಿರವಾದಾಗ 63 ಕೋಟಿಗೂ ಏರಿತು. ಪಂದ್ಯ ಅಂತ್ಯವಾಗುವ ಹೊತ್ತಿಗೆ ವೀಕ್ಷಣೆ 67.8 ಕೋಟಿ ದಾಟಿದೆ.
ಈ ಐತಿಹಾಸಿಕ ವೀಕ್ಷಣೆ ಕ್ರಿಕೆಟ್ ಅಭಿಮಾನಿಗಳ ಭಾವನಾತ್ಮಕ ಬಾಂಧವ್ಯ ಮತ್ತು ಆರ್‌ಸಿಬಿ ತಂಡದ 18 ವರ್ಷಗಳ ನಿರೀಕ್ಷೆಯ ಬಳಿಕದ ಜಯಕ್ಕೆ ಸಾಕ್ಷಿಯಾಗಿದೆ. ಐಪಿಎಲ್ 2025 ಫೈನಲ್ ಭಾರತದ ಡಿಜಿಟಲ್ ಕ್ರೀಡಾ ಪ್ರಸರಣದ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ಪಂದ್ಯವಾಗಿ ದಾಖಲಾಗಿದೆ.