ಬೆಂಗಳೂರು:ವೈಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ವಿಲೀನಗೊಂಡು ಹೊಸ ಜಂಟಿ ಉದ್ಯಮ, ಜಿಯೋಹಾಟ್‌ಸ್ಟಾರ್ ಅನ್ನು ಫೆಬ್ರವರಿ 14ರಂದು ಪ್ರಾರಂಭಗೊಂಡಿದೆ. ಕಂಪನಿಯು ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಒಂದಾಗಿಸಿದೆ.
ಜಿಯೋಹಾಟ್‌ಸ್ಟಾರ್ ಸುಮಾರು 3,00,000 ಗಂಟೆಗಳ ಮನರಂಜನೆ, ಲೈವ್ ಕ್ರೀಡೆ ಮತ್ತು ಇತರ ವೈವಿಧ್ಯಮಯ ವಿಷಯವನ್ನು ಒದಗಿಸುವ ಮೂಲಕ ಬಳಕೆದಾರರ ವೀಕ್ಷಣಾ ಅನುಭವವನ್ನು ಮತ್ತಷ್ಟು ಸುಧಾರಿಸುವ ಉದ್ದೇಶ ಹೊಂದಿದೆ. ಆದರೆ ಭಾರತೀಯ ಅಭಿಮಾನಿಗಳಿಗೆ ನಿರಾಶೆಯ ವಿಷಯ ಏನೆಂದರೆ, ಈ ಪ್ಲಾಟ್‌ಫಾರ್ಮ್ ಇನ್ನು ಉಚಿತ ಐಪಿಎಲ್ ಪ್ರಸಾರ ಮಾಡುವುದಿಲ್ಲ. ಹಣ ಕಟ್ಟಿದರೆ ಮಾತ್ರ ಮ್ಯಾಚ್ ನೋಡಬಹುದು.
ಈ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಒಂದು ಸಂಯೋಜಿತ ಚಂದಾದಾರಿಕೆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ/ ಅಂದರೆ ಬಳಕೆದಾರರು ಪ್ರೀಮಿಯಂ ವಿಷಯಕ್ಕೆ ಪ್ರವೇಶ ಪಡೆಯಲು ಹಣ ಪಾವತಿಸಬೇಕಾಗುತ್ತದೆ. ಈ ಹಿಂದೆ, ಜಿಯೋಸಿನೆಮಾ ಐದು ವರ್ಷಗಳ ಡಿಜಿಟಲ್ ಹಕ್ಕುಗಳನ್ನು ಪಡೆಯುವುದರಿಂದ ಉಚಿತವಾಗಿ ಐಪಿಎಲ್ ಪ್ರಸಾರ ಮಾಡುತ್ತಿತ್ತು, ಆದರೆ ಈಗ ಅಭಿಮಾನಿಗಳು ಕೇವಲ ಎರಡು ನಿಮಿಷಗಳವರೆಗೆ ಮಾತ್ರ ವೀಕ್ಷಿಸಲು ಸಾಧ್ಯ .
ಕಂಪನಿಯ ಪ್ರಕಾರ, ಜಿಯೋಹಾಟ್‌ಸ್ಟಾರ್ ವಿಭಿನ್ನ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಿದ್ದು, ಆರಂಭಿಕ ಪ್ಲಾನ್ 149 ರೂನಿಂದ ಪ್ರಾರಂಭವಾಗುತ್ತದೆ. ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರಸ್ತುತ ಚಂದಾದಾರರು ಸುಲಭವಾಗಿ ಹೊಸ ಪ್ಲಾಟ್‌ಫಾರ್ಮ್‌ಗೆ ವರ್ಗಾವಣೆಯಾಗಲು ಮತ್ತು ತಮ್ಮ ಚಂದಾದಾರಿಕೆಯನ್ನು ಮುಂದುವರಿಸಲು ಅವಕಾಶವಿರುತ್ತದೆ.
ಜಿಯೋಸ್ಟಾರ್‌ನ ಡಿಜಿಟಲ್ ವಿಭಾಗದ ಮುಖ್ಯಸ್ಥ ಕಿರಣ್ ಮಣಿ ಅಧಿಕೃತ ಹೇಳಿಕೆ ನೀಡಿದ್ದು. “ಜಿಯೋಹಾಟ್‌ಸ್ಟಾರ್‌ನ ಕೇಂದ್ರಭಾಗದಲ್ಲಿ ಒಂದು ಶಕ್ತಿಶಾಲಿ ದೃಷ್ಟಿಕೋನವಿದೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಶಿಫಾರಸುಗಳನ್ನು ಸಂಯೋಜಿಸುವ ಮೂಲಕ ಮತ್ತು 19ಕ್ಕೂ ಅಧಿಕ ಭಾಷೆಗಳಲ್ಲಿ ಪ್ರಸಾರವನ್ನು ಒದಗಿಸುವ ಮೂಲಕ, ನಾವು ವಿಷಯವನ್ನು ಬಳಕೆದಾರರ ಆದ್ಯತೆಗಳಿಗೆ ತಕ್ಕಂತೆ ಸರಿಹೊಂದಿಸುತ್ತಿದ್ದೇವೆ” ಎಂದು ಹೇಳಿದರು.
ಪ್ರಮುಖ ಕ್ರಿಕೆಟ್ ಟೂರ್ನಮೆಂಟ್‌ಗಳ ಪ್ರಸಾರ
ಹೊಸದಾಗಿ ಪ್ರಾರಂಭವಾದ ಈ ಪ್ಲಾಟ್‌ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಟೂರ್ನಮೆಂಟ್‌ಗಳು, ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಭಾರತೀಯ ಸ್ಟ್ರೀಟ್ ಪ್ರೀಮಿಯರ್ ಲೀಗ್ ಸೇರಿದಂತೆ ಹಲವಾರು ಕ್ರಿಕೆಟ್ ಪಂದ್ಯಗಳನ್ನು ನೇರಪ್ರಸಾರ ಮಾಡಲಿದೆ. ಇದಲ್ಲದೇ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಹಾಗೂ ಇತರ ಕ್ರೀಡೆಗಳಾದ ಪ್ರೀಮಿಯರ್ ಲೀಗ್ ಫುಟ್ಬಾಲ್, ಇಂಗ್ಲಿಷ್ ಪ್ರೀಮಿಯರ್ ಲೀಗ್, ವಿಂಬಲ್ಡನ್, ಪ್ರೋ ಕಬಡ್ಡಿ, ಇಂಡಿಯನ್ ಸೂಪರ್ ಲೀಗ್ ಮುಂತಾದ ಸ್ಪರ್ಧೆಗಳ ಪ್ರಸಾರವನ್ನು ಕೂಡ ಒದಗಿಸುತ್ತದೆ.
ಜಿಯೋಹಾಟ್‌ಸ್ಟಾರ್ ಡಿಸ್ನಿ, ಎನ್‌ಬಿಸಿಯುನಿವರ್ಸಲ್ ಪೀಕಾಕ್, ವಾರ್ನರ್ ಬ್ರದರ್ಸ್ ಡಿಸ್ಕವರಿ, ಹೆಚ್‌ಬಿಒ ಮತ್ತು ಪ್ಯಾರಮೌಂಟ್ ಸೇರಿದಂತೆ ಹಲವಾರು ಹಾಲಿವುಡ್ ವಿಷಯಗಳನ್ನು ಒದಗಿಸುತ್ತದೆ.
ಭಾರತದಲ್ಲಿ ಕ್ರೀಡೆ ಕೇವಲ ಆಟವಲ್ಲ
ಜಿಯೋಸ್ಟಾರ್‌ನ ಕ್ರೀಡಾ ವಿಭಾಗದ ಮುಖ್ಯಸ್ಥ ಸಂಜೋಗ್ ಗುಪ್ತಾ ಮಾತನಾಡಿ, “ಭಾರತದಲ್ಲಿ ಕ್ರೀಡೆ ಕೇವಲ ಆಟವಲ್. ಇದು ಉತ್ಸಾಹ, ಹೆಮ್ಮೆ ಮತ್ತು ದಶಲಕ್ಷ ಜನರನ್ನು ಒಗ್ಗೂಡಿಸುವ ಒಂದು ಸಾಮೂಹಿಕ ಅನುಭವ. ಜಿಯೋಹಾಟ್‌ಸ್ಟಾರ್ ನೇರ ಕ್ರೀಡಾ ವೀಕ್ಷಣಾ ರೀತಿಯನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದು, ತಂತ್ರಜ್ಞಾನ, ಲಭ್ಯತೆ ಮತ್ತು ಹೊಸ ಆವಿಷ್ಕಾರಗಳ ಸಮೂಹವನ್ನು ಒದಗಿಸುತ್ತಿದೆ” ಎಂದು ಹೇಳಿದರು.