ಬೆಂಗಳೂರು: ಐಪಿಎಲ್ 2026 ರ ಆಟಗಾರರ ವಿನಿಮಯ (ಟ್ರೇಡ್) ಪ್ರಕ್ರಿಯೆಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈಗಾಗಲೇ ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ರವೀಂದ್ರ ಜಡೇಜಾ-ಸಂಜು ಸ್ಯಾಮ್ಸನ್ ವಿನಿಮಯ ಒಪ್ಪಂದದ ಬಗ್ಗೆ ದಟ್ಟವಾದ ವರದಿಗಳು ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಮತ್ತೊಂದು ಮಹತ್ವದ ಒಪ್ಪಂದದ ಸುದ್ದಿ ಹೊರಬಿದ್ದಿದೆ. ಮುಂಬೈ ಇಂಡಿಯನ್ಸ್ (MI) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ನಡುವೆ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಯುವ ಆಟಗಾರ ಅರ್ಜುನ್ ತೆಂಡೂಲ್ಕರ್ ಅವರ ವಿನಿಮಯದ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಆರ್ ಅಶ್ವಿನ್ ಅವರಿಂದ ಸ್ಫೋಟಕ ಮಾಹಿತಿ
ಭಾರತದ ಹಿರಿಯ ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್‌ನ ವೇಗಿ ಶಾರ್ದೂಲ್ ಠಾಕೂರ್ ಅವರೊಂದಿಗಿನ ವಿನಿಮಯ ಒಪ್ಪಂದವನ್ನು ಬಹುತೇಕ ಅಂತಿಮಗೊಳಿಸಿದೆ ಎಂದು ಆಕಸ್ಮಿಕವಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಬಹಿರಂಗಪಡಿಸಿದ್ದಾರೆ. “ಎಂಐ ತಂಡದಿಂದ ಯಾವುದೇ ಆಟಗಾರರನ್ನು ಬಿಡುಗಡೆ ಮಾಡುತ್ತಾರೆಂದು ನನಗನಿಸುವುದಿಲ್ಲ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ದೀಪಕ್ ಚಹಾರ್‌ಗೆ ಬದಲಿಯಾಗಿ ಯಾರನ್ನಾದರೂ ಪ್ರಯತ್ನಿಸುತ್ತಾರೆಯೇ? ಅವರು ಈಗಾಗಲೇ ಎಲ್‌ಎಸ್‌ಜಿಯಿಂದ ಶಾರ್ದೂಲ್ ಠಾಕೂರ್ ಅವರನ್ನು ಟ್ರೇಡ್ ಮೂಲಕ ಪಡೆದುಕೊಂಡಿದ್ದಾರೆ,” ಎಂದು ಅಶ್ವಿನ್ ಹೇಳಿರುವುದು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಅರ್ಜುನ್‌ಗೆ ಎಂಐ ತಂಡದಿಂದ ಗೇಟ್‌ಪಾಸ್?
ಕ್ರಿಕ್‌ಬಝ್‌ನ ಹೊಸ ವರದಿಯ ಪ್ರಕಾರ, ಶಾರ್ದೂಲ್ ಠಾಕೂರ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಕರೆತರಲು, ಅರ್ಜುನ್ ತೆಂಡೂಲ್ಕರ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕಳುಹಿಸಿಕೊಡುವ ಸಾಧ್ಯತೆಯಿದೆ. ಈ ಎರಡೂ ವರ್ಗಾವಣೆಗಳು ನೇರ ವಿನಿಮಯದ ಭಾಗವಾಗಿರಬಹುದು ಅಥವಾ ಎರಡು ಪ್ರತ್ಯೇಕ ನಗದು ಒಪ್ಪಂದಗಳಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಶಾರ್ದೂಲ್ ಠಾಕೂರ್, ಕೆಲವು ಮಹತ್ವದ ಪ್ರದರ್ಶನಗಳನ್ನು ನೀಡಿದರೂ, ನಿರಂತರ ಅವಕಾಶಗಳನ್ನು ಪಡೆಯಲು ವಿಫಲರಾದ ಆಟಗಾರರಾಗಿದ್ದಾರೆ. ಕಳೆದ ವರ್ಷ ಗಾಯಾಳು ಬದಲಿ ಆಟಗಾರನಾಗಿ ಲಕ್ನೋ ತಂಡ ಸೇರಿದ್ದ ಅವರು, 2025ರ ಐಪಿಎಲ್ ಸೀಸನ್‌ನಲ್ಲಿ 10 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಪಡೆದಿದ್ದರು.ಮತ್ತೊಂದೆಡೆ, ಅರ್ಜುನ್ ತೆಂಡೂಲ್ಕರ್ ಕೆಲವು ಸೀಸನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೂ, ಕೇವಲ ಐದು ಪಂದ್ಯಗಳನ್ನು ಆಡಿ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ.
ಈ ಸಂಭವನೀಯ ಒಪ್ಪಂದವು ಅಂತಿಮವಾಗಿ ಜಾರಿಗೆ ಬರುತ್ತದೆಯೇ ಇಲ್ಲವೇ ಎಂಬುದು ಕುತೂಹಲಕಾರಿಯಾಗಿದೆ. ಎಲ್ಲಾ ತಂಡಗಳು ತಮ್ಮ ಐಪಿಎಲ್ 2026ರ ಆಟಗಾರರ ಉಳಿಕೆ ಪಟ್ಟಿಯನ್ನು ಶೀಘ್ರದಲ್ಲೇ ಸಲ್ಲಿಸಬೇಕಾಗಿದ್ದು, ನವೆಂಬರ್ 15 ರಂದು ಅಧಿಕೃತ ಪ್ರಕಟಣೆ ಹೊರಬೀಳಲಿದೆ.
ಇದನ್ನೂ ಓದಿ; ಮದುವೆ ಮಂಟಪದಲ್ಲೇ ವರನಿಗೆ ಚಾಕು ಇರಿತ | 2 ಕಿ.ಮೀ.ವರೆಗೆ ಆರೋಪಿಯನ್ನು ಬೆನ್ನಟ್ಟಿದ ಡ್ರೋನ್ ಕ್ಯಾಮೆರಾ!



















