ಚೆನ್ನೈ : ಐಪಿಎಲ್ 2026ರ ಆರಂಭಿಕ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು ಅನುಭವಿಸುತ್ತಿರುವ ಸತತ ಸೋಲುಗಳು ತಂಡದ ಮೇಲೆ ಒತ್ತಡವನ್ನು ಹೆಚ್ಚಿಸಿವೆ. ಅದರಲ್ಲೂ ತಂಡದ ಪ್ರಮುಖ ಸ್ಪಿನ್ ಅಸ್ತ್ರ ವರುಣ್ ಚಕ್ರವರ್ತಿ ಅವರ ಫಾರ್ಮ್ ಈಗ ದೊಡ್ಡ ಚಿಂತೆಯ ವಿಷಯವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಸ್‌ಕೆ ಮತ್ತು ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ವರುಣ್ ಚಕ್ರವರ್ತಿ ಅವರ ಬೌಲಿಂಗ್ ಲಯ ತಪ್ಪಿರುವ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರು ವರುಣ್ ಚಕ್ರವರ್ತಿ ಅವರ ಒಂದೇ ಓವರ್‌ನಲ್ಲಿ 25 ರನ್ ಚಚ್ಚಿದ ನಂತರ, ಸ್ಪಿನ್ನರ್‌ನ ಆತ್ಮವಿಶ್ವಾಸ ಸಂಪೂರ್ಣವಾಗಿ ಕುಸಿದಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ ‘ಆಶ್ ಕಿ ಬಾತ್’ನಲ್ಲಿ ಕೆಕೆಆರ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿದ ಅಶ್ವಿನ್, “ಈ ಋತುವಿನಲ್ಲಿ ಕೆಕೆಆರ್ ತಂಡವು ಸಾಕಷ್ಟು ಸವಾಲುಗಳನ್ನು ಎದುರಿಸಲಿದೆ. ಅವರ ತಂಡದಲ್ಲಿ ನಾಲ್ಕು ಓವರ್‌ಗಳನ್ನು ನಂಬಿ ನೀಡಬಹುದಾದ ಒಬ್ಬ ಬೌಲರ್ ಕೂಡ ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಒಂದು ತಂಡದಲ್ಲಿ ಒಬ್ಬರು ಅಥವಾ ಇಬ್ಬರು ಬೌಲರ್‌ಗಳು ದುರ್ಬಲರಿರುತ್ತಾರೆ, ಆದರೆ ಕೆಕೆಆರ್ ತಂಡದ ಇಡೀ ಬೌಲಿಂಗ್ ವಿಭಾಗವೇ ದುರ್ಬಲವಾಗಿ ಕಾಣುತ್ತಿದೆ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಡೆನ್ ಗಾರ್ಡನ್‌ನಲ್ಲಿ ಕೆಕೆಆರ್ ಬೌಲರ್‌ಗಳು ರನ್ ಬಿಟ್ಟುಕೊಟ್ಟ ರೀತಿ ಅಶ್ವಿನ್‌ಗೆ ನಿರಾಸೆ ಮೂಡಿಸಿದೆ.
ಇಂಥ ಪರಿಸ್ಥಿತಿ ಬರುತ್ತದೆ
ವರುಣ್ ಚಕ್ರವರ್ತಿ ಎದುರಿಸುತ್ತಿರುವ ಈ ಕಠಿಣ ಪರಿಸ್ಥಿತಿಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಅಶ್ವಿನ್, “ಪ್ರತಿಯೊಬ್ಬ ಬೌಲರ್ ಜೀವನದಲ್ಲಿ ಇಂತಹ ಒಂದು ಹಂತ ಬರುತ್ತದೆ. ವರುಣ್ ಹಿಂದೆಂದೂ ಇಂತಹ ಕೆಟ್ಟ ಫಾರ್ಮ್ ಕಂಡಿರಲಿಲ್ಲ. ಇದು ಅವರಿಗೆ ದೊಡ್ಡ ಆಘಾತವಾಗಿದೆ. ಅವರ ಬಾಡಿ ಲ್ಯಾಂಗ್ವೇಜ್ ನೋಡಿದರೆ ಆತ್ಮವಿಶ್ವಾಸ ತುಂಬಾನೇ ಕಡಿಮೆ ಇರುವುದು ಎದ್ದು ಕಾಣುತ್ತಿದೆ,” ಎಂದು ಹೇಳಿದ್ದಾರೆ. ವರುಣ್ ಈಗ ಸ್ವಲ್ಪ ಸಮಯ ವಿಶ್ರಾಂತಿ ಪಡೆದು ತಮ್ಮ ಅಭ್ಯಾಸದ ಕ್ರಮವನ್ನು ಬದಲಿಸಿಕೊಳ್ಳುವ ಅವಶ್ಯಕತೆಯಿದೆ ಎಂದು ಸಲಹೆ ನೀಡಿದ್ದಾರೆ. ಬ್ಯಾಟರ್‌ಗಳು ಸುಲಭವಾಗಿ ರನ್ ಗಳಿಸುತ್ತಿರುವಾಗ, ಹೊಸ ತಂತ್ರಗಳನ್ನು ಹುಡುಕಿ ಪುಟಿದೇಳುವುದು ಅನಿವಾರ್ಯ ಎಂದು ಅವರು ಈ ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : IPL ಟಿಕೆಟ್‌ಗೆ ಶಾಸಕರು ಕೈಚಾಚುವುದು ನಾಚಿಕೆಗೇಡಿನ ಸಂಗತಿ : ಸದಾನಂದಗೌಡ ಆಕ್ರೋಶ



















