ನವದೆಹಲಿ: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಒಟ್ಟು 359 ಆಟಗಾರರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಕಳೆದ ಸೀಸನ್‌ನಲ್ಲಿ (2025) ಆರ್‌ಸಿಬಿ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್ ಅಪ್ ಆಗಿದ್ದರೂ, ಪಂಜಾಬ್ ಕಿಂಗ್ಸ್ ತೋರಿದ ಪ್ರದರ್ಶನ ಅಭಿಮಾನಿಗಳ ಮನಗೆದ್ದಿತ್ತು. ಇದೀಗ 2026ರಲ್ಲಿ ಕಪ್ ಎತ್ತಿಹಿಡಿಯುವ ಗುರಿಯೊಂದಿಗೆ ಪಂಜಾಬ್ ಫ್ರಾಂಚೈಸಿ ಐವರು ಪ್ರಮುಖ ಆಟಗಾರರ ಮೇಲೆ ಕಣ್ಣಿಟ್ಟಿದೆ.
ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್ ಅವರಂತಹ ಬಲಿಷ್ಠ ಆಟಗಾರರನ್ನು ಈಗಾಗಲೇ ಉಳಿಸಿಕೊಂಡಿರುವ ಪಂಜಾಬ್, ಮಿನಿ ಹರಾಜಿನಲ್ಲಿ ಈ ಕೆಳಗಿನ ಐವರು ಆಟಗಾರರನ್ನು ಖರೀದಿಸುವ ಮೂಲಕ ತಂಡದ ಸಮತೋಲನ ಕಾಪಾಡಿಕೊಳ್ಳಲು ಮುಂದಾಗಬಹುದು.
ಪಂಜಾಬ್ ಕಿಂಗ್ಸ್ ರಾಡಾರ್‌ನಲ್ಲಿರುವ 5 ಆಟಗಾರರು:
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ):
ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಅವರು 2 ಕೋಟಿ ರೂ. ಮೂಲಬೆಲೆಯೊಂದಿಗೆ ಹರಾಜಿಗೆ ಲಭ್ಯರಿದ್ದಾರೆ. ಪಂಜಾಬ್ ತಂಡದ ಟಾಪ್ ಆರ್ಡರ್‌ನಲ್ಲಿ ಒಬ್ಬ ‘ಆಂಕರ್’ (ನೆಲೆನಿಂತು ಆಡುವ ಆಟಗಾರ) ಅಗತ್ಯವಿದ್ದು, ಸ್ಮಿತ್ ಅದಕ್ಕೆ ಸೂಕ್ತ ಆಯ್ಕೆ. ಅವರ ನಾಯಕತ್ವದ ಗುಣ ಮತ್ತು ಐಪಿಎಲ್ ಅನುಭವ ತಂಡಕ್ಕೆ ಒತ್ತಡದ ಸಂದರ್ಭಗಳಲ್ಲಿ ನೆರವಾಗಬಲ್ಲದು. - ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್):
ಇಂಗ್ಲೆಂಡ್‌ನ ವಿಕೆಟ್ ಕೀಪರ್-ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರನ್ನು ಮರಳಿ ಪಡೆಯಲು ಪಂಜಾಬ್ ಉತ್ಸುಕವಾಗಬಹುದು. ತಂಡದಿಂದ ಬಿಡುಗಡೆಗೊಂಡಿರುವ ಜೋಶ್ ಇಂಗ್ಲಿಸ್ ಅವರ ಸ್ಥಾನವನ್ನು ತುಂಬಲು ಬೈರ್‌ಸ್ಟೋವ್ ಸಮರ್ಥರು. ಆರಂಭಿಕರಾಗಿ ಕಣಕ್ಕಿಳಿದು ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟವಾಡುವ ಅವರ ಸಾಮರ್ಥ್ಯ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. - ರವಿ ಬಿಷ್ಣೋಯ್ (ಭಾರತ):
ತಂಡದಲ್ಲಿ ಈಗಾಗಲೇ ‘ಸ್ಪಿನ್ ಮಾಂತ್ರಿಕ’ ಯುಜ್ವೇಂದ್ರ ಚಹಲ್ ಇದ್ದಾರೆ. ಅವರಿಗೆ ಸಾಥ್ ನೀಡಲು ಮತ್ತೊಬ್ಬ ರಿಸ್ಟ್ ಸ್ಪಿನ್ನರ್ ಆಗಿ ರವಿ ಬಿಷ್ಣೋಯ್ ಅವರನ್ನು ಸೆಳೆಯಲು ಪಂಜಾಬ್ ಪ್ರಯತ್ನಿಸಬಹುದು. ಬಿಷ್ಣೋಯ್ ಹಾಗೂ ಚಹಲ್ ಜೋಡಿ ಒಂದಾದರೆ ಎದುರಾಳಿ ಬ್ಯಾಟರ್‌ಗಳನ್ನು ಕಟ್ಟಿಹಾಕುವುದು ಸುಲಭವಾಗಲಿದೆ. ಅಲ್ಲದೆ, ಬಿಷ್ಣೋಯ್ ಅವರ ಫೀಲ್ಡಿಂಗ್ ಕೂಡ ತಂಡಕ್ಕೆ ಲಾಭದಾಯಕ. - ವಿಷ್ಣು ವಿನೋದ್ (ಭಾರತ):
ದೇಶೀಯ ಕ್ರಿಕೆಟ್‌ನಲ್ಲಿ ಕೇರಳ ಪರ ಅಬ್ಬರಿಸಿರುವ ವಿಕೆಟ್ ಕೀಪರ್-ಬ್ಯಾಟರ್ ವಿಷ್ಣು ವಿನೋದ್ ಅವರ ಮೇಲೂ ಪಂಜಾಬ್ ಕಣ್ಣಿಟ್ಟಿದೆ. ಇವರು ಕೆಳಕ್ರಮಾಂಕದಲ್ಲಿ ಬಂದು ಬಿರುಸಿನ ಬ್ಯಾಟಿಂಗ್ ನಡೆಸಬಲ್ಲರು. 72 ಟಿ20 ಪಂದ್ಯಗಳಲ್ಲಿ 1757 ರನ್ ಗಳಿಸಿರುವ ಇವರು, ಭಾರತೀಯ ವಿಕೆಟ್ ಕೀಪರ್ ಕೋಟಾದಲ್ಲಿ ಉತ್ತಮ ಆಯ್ಕೆಯಾಗಬಲ್ಲರು. - ಕೂಪರ್ ಕಾನೋಲಿ (ಆಸ್ಟ್ರೇಲಿಯಾ):
ಕೇವಲ 22 ವರ್ಷದ ಆಸ್ಟ್ರೇಲಿಯಾದ ಯುವ ಪ್ರತಿಭೆ ಕೂಪರ್ ಕಾನೋಲಿ ಈ ಬಾರಿ ಹರಾಜಿನ ಆಕರ್ಷಣೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ನಿರ್ಗಮನದಿಂದ ತೆರವಾದ ಆಲ್ರೌಂಡರ್ ಸ್ಥಾನವನ್ನು ತುಂಬಲು ಕಾನೋಲಿ ಸೂಕ್ತ. ಎಡಗೈ ಬ್ಯಾಟಿಂಗ್ ಜೊತೆಗೆ ಸ್ಪಿನ್ ಬೌಲಿಂಗ್ ಮಾಡಬಲ್ಲ ಇವರು ಪಂಜಾಬ್ ತಂಡಕ್ಕೆ ಭವಿಷ್ಯದ ಆಸ್ತಿಯಾಗಬಲ್ಲರು.
ಉಳಿಸಿಕೊಂಡಿರುವ ಪ್ರಮುಖ ಆಟಗಾರರು:
ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್, ಮಾರ್ಕಸ್ ಸ್ಟೊಯ್ನಿಸ್, ಪ್ರಭಾಸಿಮ್ರಾನ್ ಸಿಂಗ್, ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್.
ಇದನ್ನೂ ಓದಿ: ಗಂಭೀರ್ ತಂತ್ರಕ್ಕೆ ತಿಲಕ್ ವರ್ಮಾ ಬೆಂಬಲ : ‘ಆರಂಭಿಕ ಆಟಗಾರರನ್ನು ಹೊರತುಪಡಿಸಿ ಉಳಿದೆಲ್ಲರೂ ಫ್ಲೆಕ್ಸಿಬಲ್’



















