ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ತಂಡದ ಪ್ರಮುಖ ವೇಗದ ಬೌಲರ್‌ಗಳಾದ ಹರ್ಷಿತ್ ರಾಣಾ ಮತ್ತು ಕೋಟಿ ವೀರ ಮತೀಶ ಪತಿರಣ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ತಂಡದ ಮುಖ್ಯ ತರಬೇತುದಾರ ಅಭಿಷೇಕ್ ನಾಯರ್ ಈ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ.
ಕಳೆದ ಎರಡು ಸೀಸನ್‌ಗಳಲ್ಲಿ, ವಿಶೇಷವಾಗಿ ಕೆಕೆಆರ್ ತಂಡದ ಚಾಂಪಿಯನ್ಸ್ ಅಭಿಯಾನದಲ್ಲಿ ಪ್ರಮುಖ ಅಸ್ತ್ರವಾಗಿದ್ದ ಯುವ ವೇಗಿ ಹರ್ಷಿತ್ ರಾಣಾ, ಮುಂಬರುವ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಬಹುತೇಕ ಹೊರಬಿದ್ದಿದ್ದಾರೆ. ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ ಅವರ ಬಲಗಾಲಿನ ಮಂಡಿಗೆ (lateral meniscus tear) ತೀವ್ರ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯಕ್ಕೆ ಅವರು ಯಾವಾಗ ಮೈದಾನಕ್ಕೆ ಮರಳಲಿದ್ದಾರೆ ಎಂಬ ಬಗ್ಗೆ ನಿಖರ ಮಾಹಿತಿಯಿಲ್ಲ.
“ಹರ್ಷಿತ್ ರಾಣಾ ಅಲಭ್ಯತೆ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ. ಕಳೆದ ಕೆಲವು ದಿನಗಳಿಂದ ನಾವು ಹಲವು ಬೌಲರ್‌ಗಳನ್ನು ಗಮನಿಸುತ್ತಿದ್ದೇವೆ. ತಂಡದ ನಾಯಕತ್ವ ಗುಂಪಿನೊಂದಿಗೆ ಚರ್ಚಿಸಿ ನಮ್ಮ ತಂಡಕ್ಕೆ ಯಾರು ಸೂಕ್ತವಾಗಬಲ್ಲರು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಶೀಘ್ರದಲ್ಲೇ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದ್ದೇವೆ” ಎಂದು ಜಿಯೋಸ್ಟಾರ್ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ನಾಯರ್ ತಿಳಿಸಿದ್ದಾರೆ. ಮಾರ್ಚ್ 25ರಂದು ತಂಡ ಮುಂಬೈಗೆ ಪ್ರಯಾಣ ಬೆಳೆಸಲಿದ್ದು, ಅದಕ್ಕೂ ಮುನ್ನ ಬದಲಿ ಆಟಗಾರನ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.
ಏಪ್ರಿಲ್ ಮಧ್ಯಭಾಗದವರೆಗೆ ಮತೀಶ ಪತಿರಣ ಡೌಟ್!
ಕೆಕೆಆರ್ ಫ್ರಾಂಚೈಸಿಯು ಬರೋಬ್ಬರಿ 18 ಕೋಟಿ ರೂ. ನೀಡಿ ಖರೀದಿಸಿದ್ದ ಶ್ರೀಲಂಕಾದ ಸ್ಟಾರ್ ವೇಗಿ ಮತೀಶ ಪತಿರಣ ಕೂಡ ಸಂಪೂರ್ಣ ಫಿಟ್ ಆಗಿಲ್ಲ. ಟಿ20 ವಿಶ್ವಕಪ್ ವೇಳೆ ಸ್ನಾಯು ಸೆಳೆತಕ್ಕೆ (calf strain) ಒಳಗಾಗಿದ್ದ ಅವರು, ಸದ್ಯ ಪುನರ್ವಸತಿ ಪೂರೈಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಅವರಿಗೆ ಐಪಿಎಲ್‌ನಲ್ಲಿ ಆಡಲು ನಿರಾಕ್ಷೇಪಣಾ ಪತ್ರ (NOC) ನೀಡಿದ್ದರೂ, ಅವರು ಪಂದ್ಯವನ್ನಾಡಲು ಏಪ್ರಿಲ್ ಮಧ್ಯಭಾಗದವರೆಗೆ ಕಾಯಬೇಕಿದೆ.
“ಪತಿರಣ ಅವರ ಫಿಟ್‌ನೆಸ್ ಕುರಿತು ನಮಗೆ ಲಭ್ಯವಾಗಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಅವರು ಏಪ್ರಿಲ್ ಮಧ್ಯದ ವೇಳೆಗೆ ಸಂಪೂರ್ಣ ಮ್ಯಾಚ್ ಫಿಟ್ ಆಗುವ ನಿರೀಕ್ಷೆಯಿದೆ” ಎಂದು ನಾಯರ್ ಸ್ಪಷ್ಟಪಡಿಸಿದ್ದಾರೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಬಿಕ್ಕಟ್ಟು
ಗಾಯದ ಸಮಸ್ಯೆಗಳ ಸರಮಾಲೆಯಿಂದಾಗಿ ಕೆಕೆಆರ್ ತಂಡದ ವೇಗದ ಬೌಲಿಂಗ್ ವಿಭಾಗವು ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ. ಬಿಸಿಸಿಐ ನಿರ್ದೇಶನದ ಮೇರೆಗೆ ತಂಡದಿಂದ ಬಿಡುಗಡೆಯಾದ ಮುಸ್ತಫಿಜುರ್ ರೆಹಮಾನ್ ಬದಲಿಗೆ ಈಗಾಗಲೇ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ (Blessing Muzarabani) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇದೀಗ ರಾಣಾ ಮತ್ತು ಪತಿರಣ ಅನುಪಸ್ಥಿತಿಯಲ್ಲಿ ಬಲಿಷ್ಠ ಬೌಲಿಂಗ್ ಪಡೆಯನ್ನು ಕಟ್ಟುವ ಸವಾಲು ಕೋಚ್ ನಾಯರ್ ಮತ್ತು ಮ್ಯಾನೇಜ್ಮೆಂಟ್ ಮುಂದಿದೆ.
ನ್ಯೂಜಿಲೆಂಡ್‌ನ ಫಿನ್ ಅಲೆನ್, ಟಿಮ್ ಸೈಫರ್ಟ್ ಮತ್ತು ರಚಿನ್ ರವೀಂದ್ರ ಈ ವಾರದ ಅಂತ್ಯದಲ್ಲಿ ಕ್ಯಾಂಪ್ ಸೇರಿಕೊಳ್ಳಲಿದ್ದು, ತಂಡದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಲಿದ್ದಾರೆ. ಮಾರ್ಚ್ 29ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್ (MI) ಸವಾಲನ್ನು ಎದುರಿಸಲಿದ್ದು, ಬೌಲಿಂಗ್ ಪಡೆಯ ಕೊರತೆಯನ್ನು ಹೇಗೆ ನಿಭಾಯಿಸಲಿದೆ ಕಾದು ನೋಡಬೇಕಿದೆ.
ಇದನ್ನೂ ಓದಿ : ಗಂಭೀರ ಗಾಯದ ಸವಾಲು : ಐಪಿಎಲ್ 2026 ಕ್ಕೆ ಮುನ್ನ ಶ್ರೇಯಸ್ ಅಯ್ಯರ್ ಚೇತರಿಕೆಯ ಕಠಿಣ ಪಯಣ



















