ಅಬುಧಾಬಿ : ಅಬುಧಾಬಿಯಲ್ಲಿ ನಡೆದ ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವು 13 ಹೊಸ ಆಟಗಾರರನ್ನು ಖರೀದಿಸುವ ಮೂಲಕ ತನ್ನ ಪಡೆಯನ್ನು ಬಲಿಷ್ಠಗೊಳಿಸಿದೆ. ಕೋಟಿ ಕೋಟಿ ಸುರಿದು ಸ್ಟಾರ್ ಆಟಗಾರರನ್ನು ಖರೀದಿಸಿದ ಕೆಕೆಆರ್ ನಡೆ ಒಂದೆಡೆಯಾದರೆ, ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದ ಕುಡಿಯೊಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿರುವುದು ಈಗ ಕ್ರಿಕೆಟ್ ಅಂಗಳದಾಚೆಗೂ ಚರ್ಚೆಗೆ ಗ್ರಾಸವಾಗಿದೆ.
ಹೌದು, ಬಿಹಾರದ ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಪಪ್ಪು ಯಾದವ್ ಅವರ ಪುತ್ರ ಸಾರ್ಥಕ್ ರಂಜನ್ ಅವರನ್ನು ಕೆಕೆಆರ್ ಫ್ರಾಂಚೈಸಿ 30 ಲಕ್ಷ ರೂಪಾಯಿ ನೀಡಿ ಖರೀದಿಸಿದೆ.
ಮಗನ ಸಾಧನೆಗೆ ತಂದೆ ಭಾವುಕ
ಹರಾಜಿನಲ್ಲಿ ಮಗ ಕೆಕೆಆರ್ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆಯೇ ಪಪ್ಪು ಯಾದವ್ ಅವರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಅವರು, ಮಗನನ್ನು ಮುಕ್ತವಾಗಿ ಆಡುವಂತೆ ಹುರಿದುಂಬಿಸಿದ್ದಾರೆ. “ನಿನ್ನ ಪ್ರತಿಭೆಯನ್ನು ನಂಬು, ಕ್ರಿಕೆಟ್ ಮೂಲಕವೇ ನಿನ್ನ ಹೆಸರನ್ನು ಗಳಿಸು,” ಎಂದು ಹಾರೈಸಿದ್ದಾರೆ. ತಂದೆಯ ಈ ಭಾವುಕ ಸಂದೇಶ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯಾರು ಈ ಸಾರ್ಥಕ್ ರಂಜನ್?
ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ಸಾರ್ಥಕ್ ರಂಜನ್ ಕ್ರಿಕೆಟ್ ಕಡೆಗೆ ಒಲವು ತೋರಿದ್ದಾರೆ. ದೆಹಲಿ ಪರ ದೇಶೀಯ ಕ್ರಿಕೆಟ್ ಆಡುವ ಸಾರ್ಥಕ್, ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿದ್ದಾರೆ.
- ಸಾಧನೆ : ಇದುವರೆಗೆ 2 ಪ್ರಥಮ ದರ್ಜೆ ಪಂದ್ಯಗಳು, 4 ಲಿಸ್ಟ್-ಎ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳನ್ನು ಆಡಿದ್ದಾರೆ.
- ರನ್ ಗಳಿಕೆ : ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 28 ರನ್, ಲಿಸ್ಟ್-ಎ ಕ್ರಿಕೆಟ್‌ನಲ್ಲಿ 26.25ರ ಸರಾಸರಿಯಲ್ಲಿ 105 ರನ್ ಹಾಗೂ ಟಿ20ಯಲ್ಲಿ 66 ರನ್ ಗಳಿಸಿದ್ದಾರೆ. ಅಂಕಿಅಂಶಗಳು ಸಾಧಾರಣವಾಗಿದ್ದರೂ, ಭವಿಷ್ಯದ ದೃಷ್ಟಿಯಿಂದ ಕೆಕೆಆರ್ ಇವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಇದನ್ನೂ ಓದಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ | ಗಾಯಕ ಮ್ಯೂಸಿಕ್ ಮೈಲಾರಿ ಬಂಧನ!


















