ಬೆಂಗಳೂರು: ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ಮುಂಬರುವ 2026ರ ಟೂರ್ನಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಫಿನ್ ಅಲೆನ್, ಟಿಮ್ ಸೈಫರ್ಟ್ ಅವರಂತಹ ಸ್ಫೋಟಕ ಓಪನರ್‌ಗಳ ಜೊತೆಗೆ ಕ್ಯಾಮರೂನ್ ಗ್ರೀನ್ ಮತ್ತು ಮತೀಶ ಪತಿರಣ ಅವರಂತಹ ಭವಿಷ್ಯದ ತಾರೆಗಳನ್ನು ಖರೀದಿಸಿ, ಬಲಿಷ್ಠ ಪಡೆಯನ್ನು ಕಟ್ಟಿದೆ.
ಗಾಯದ ಸಮಸ್ಯೆಗಳಿಂದಾಗಿ ಟೂರ್ನಿಗೂ ಮುನ್ನವೇ ತಂಡದ ಪ್ರಮುಖ ವೇಗಿಗಳು ಅಲಭ್ಯರಾಗಿದ್ದು, ಕೆಕೆಆರ್‌ಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಬದಲಿ ಆಟಗಾರನಾಗಿ ತಂಡ ಸೇರಿರುವ ಜಿಂಬಾಬ್ವೆ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಜನಪ್ರಿಯ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.
ಮುಜರಬಾನಿ ಇಂಪ್ಯಾಕ್ಟ್ ಬಗ್ಗೆ ಚೋಪ್ರಾ ಅನುಮಾನ!
ಗಾಯಗೊಂಡಿರುವ ಮುಸ್ತಫಿಜುರ್ ರೆಹಮಾನ್ ಬದಲಿಗೆ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಕೆಕೆಆರ್ ಸೇರಿಸಿಕೊಂಡಿದೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಮುಜರಬಾನಿ 6 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ, ಭಾರತೀಯ ಪಿಚ್‌ಗಳಲ್ಲಿ ಅವರ ಪ್ರದರ್ಶನ ಅಷ್ಟೇನೂ ಪರಿಣಾಮಕಾರಿಯಾಗಲಾರದು ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
“ಟಿ20 ವಿಶ್ವಕಪ್‌ನಲ್ಲಿ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದರು ಎಂಬುದು ನಿಜ. ಆದರೆ, ಅದೇ ಫಾರ್ಮ್ ಅನ್ನು ಐಪಿಎಲ್‌ನಲ್ಲಿ ಮುಂದುವರಿಸುತ್ತಾರೆ ಎಂಬ ಬಗ್ಗೆ ನನಗೆ ಹೆಚ್ಚಿನ ಭರವಸೆಯಿಲ್ಲ. ಇದು ನನ್ನ ವೈಯಕ್ತಿಕ ಅನಿಸಿಕೆ, ಒಂದುವೇಳೆ ನಾನು ತಪ್ಪಾಗಿದ್ದರೆ, ಮೊದಲಿಗನಾಗಿ ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ, ಅವರು ಹೆಚ್ಚಾಗಿ ಬೌಲ್ ಮಾಡುವ ಲೆಂಗ್ತ್ (Length) ಮತ್ತು ಭಾರತದ ಪಿಚ್‌ಗಳ ಸ್ವರೂಪವನ್ನು ಗಮನಿಸಿದರೆ, ಅವರ ಇಂಪ್ಯಾಕ್ಟ್ ಬಗ್ಗೆ ನನಗೆ ಶೇ. 100ರಷ್ಟು ಖಾತ್ರಿಯಿಲ್ಲ” ಎಂದು ಚೋಪ್ರಾ ವಿಶ್ಲೇಷಿಸಿದ್ದಾರೆ.
ಹೊಸ ಚೆಂಡಿನಲ್ಲಿ, ಪವರ್-ಪ್ಲೇ ಓವರ್‌ಗಳಲ್ಲಿ ಮುಜರಬಾನಿ ಯಶಸ್ವಿಯಾದರೂ, ಡೆತ್ ಓವರ್‌ಗಳಲ್ಲಿ (Death Overs) ರನ್ ನಿಯಂತ್ರಿಸುವುದು ಅವರಿಗೆ ಕಷ್ಟವಾಗಬಹುದು. ಪತಿರಣ ಮತ್ತು ಹರ್ಷಿತ್ ರಾಣಾ ಅಲಭ್ಯತೆಯಲ್ಲಿ ಮುಜರಬಾನಿ ಡೆತ್ ಓವರ್‌ಗಳಲ್ಲಿ ಬೌಲ್ ಮಾಡುವುದು ಅನಿವಾರ್ಯವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಹರ್ಷಿತ್ ರಾಣಾ ಜಾಗಕ್ಕೆ ಸಿಮರ್‌ಜೀತ್ ಸಿಂಗ್?
ಕಳೆದ ಸೀಸನ್‌ನಲ್ಲಿ ಕೆಕೆಆರ್‌ನ ಪ್ರಮುಖ ವೇಗಿಯಾಗಿದ್ದ ಹರ್ಷಿತ್ ರಾಣಾ ಕೂಡ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನೊಂದೆಡೆ, ಶ್ರೀಲಂಕಾದ ಸ್ಟಾರ್ ವೇಗಿ ಮತೀಶ ಪತಿರಣ ಸಹ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ಟೂರ್ನಿಯ ಮೊದಲಾರ್ಧದ ಪಂದ್ಯಗಳಿಗೆ ಲಭ್ಯರಿರುವ ಬಗ್ಗೆ ಅನುಮಾನಗಳಿವೆ. ಇದರಿಂದಾಗಿ ಕೆಕೆಆರ್ ಬೌಲಿಂಗ್ ವಿಭಾಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಮಾಧ್ಯಮ ವರದಿಗಳ ಪ್ರಕಾರ, ಹರ್ಷಿತ್ ರಾಣಾ ಅವರ ಬದಲಿಗೆ ಸಿಎಸ್‌ಕೆ (CSK) ತಂಡದ ಮಾಜಿ ವೇಗಿ ಸಿಮರ್‌ಜೀತ್ ಸಿಂಗ್ (Simarjeet Singh) ಅವರನ್ನು ಸೇರಿಸಿಕೊಳ್ಳಲು ಕೆಕೆಆರ್ ಒಲವು ತೋರಿದೆ. ಈಗಾಗಲೇ ಬೌಲಿಂಗ್ ಟ್ರಯಲ್ಸ್ (Trials) ನಡೆಸಲಾಗಿದ್ದು, ಸಿಮರ್‌ಜೀತ್ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಕೆಕೆಆರ್ ಸಂಭಾವ್ಯ ಪ್ಲೇಯಿಂಗ್-12
ಅಜಿಂಕ್ಯ ರಹಾನೆ ಅವರೇ ಈ ಬಾರಿಯೂ ತಂಡವನ್ನು ಮುನ್ನಡೆಸಲಿದ್ದಾರೆ. ಆರಂಭಿಕರಾಗಿ ಫಿನ್ ಅಲೆನ್ ಮತ್ತು ಸುನಿಲ್ ನರೈನ್ ಕಣಕ್ಕಿಳಿಯುವ ಸಾಧ್ಯತೆಯಿದೆ. 3ನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಆಡಲಿದ್ದು, ರಹಾನೆ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಗಬಹುದು. ವಿಕೆಟ್-ಕೀಪಿಂಗ್ (Wicket-keeping) ಜವಾಬ್ದಾರಿಯನ್ನು ತೇಜಸ್ವಿ ಸಿಂಗ್ ಅಥವಾ ಯುವ ಆಟಗಾರ ಅಂಗ್‌ಕ್ರಿಶ್ ರಘುವಂಶಿ (Angkrish Raghuvanshi) ವಹಿಸಿಕೊಳ್ಳುವ ನಿರೀಕ್ಷೆಯಿದೆ.
ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ, ಮನೀಶ್ ಪಾಂಡೆ, ರಿಂಕು ಸಿಂಗ್, ರೋವ್ಮನ್ ಪೊವೆಲ್ ಮತ್ತು ರಮಣ್‌ದೀಪ್ ಸಿಂಗ್ ಅವರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ಸ್ಪಿನ್ ವಿಭಾಗವನ್ನು ವರುಣ್ ಚಕ್ರವರ್ತಿ ಮುನ್ನಡೆಸಿದರೆ, ವೇಗದ ಬೌಲಿಂಗ್ ವಿಭಾಗದಲ್ಲಿ ವೈಭವ್ ಅರೋರಾ, ಉಮ್ರಾನ್ ಮಲಿಕ್ ಹಾಗೂ ಆಕಾಶ್ ದೀಪ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಐಪಿಎಲ್ 2026 : ಟೂರ್ನಿಗೂ ಮುನ್ನವೇ ಕೆಕೆಆರ್ ತಂಡಕ್ಕೆ ಬಿಗ್ ಶಾಕ್ ; ಸ್ಟಾರ್ ಬೌಲರ್‌ಗಳು ಔಟ್!



















