ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನ 18ನೇ ಆವೃತ್ತಿಯ ಮೊದಲ ಮೂರು ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅವರ ಕಾಯಂ ನಾಯಕ ಸಂಜು ಸ್ಯಾಮ್ಸಲ್ ಅಲಭ್ಯರಾಗಿದ್ದಾರೆ., ಉದಯೋನ್ಮುಖ ಬ್ಯಾಟ್ಸ್ಮನ್ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಸಂಜು ಸ್ಯಾಮ್ಸನ್ ಬೆರಳಿನ ಶಸ್ತ್ರಚಿಕಿತ್ಸೆಯ ನಂತರ ಇನ್ನೂ ವಿಕೆಟ್-ಕೀಪಿಂಗ್‌ಗೆ ಅನುಮತಿ ಪಡೆಯದ ಕಾರಣ, ಅವರು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕೇವಲ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ರಾಜಸ್ಥಾನ್ ತಂಡವು ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ.
ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಜೋಫ್ರಾ ಆರ್ಚರ್ ಅವರ ಎಸೆತದಿಂದ ಸಂಜು ಸ್ಯಾಮ್ಸನ್ ಅವರ ಬೆರಳಿಗೆ ಮೂಳೆ ಮುರಿತ ಉಂಟಾಗಿತ್ತು. ನಂತರ ಅವರು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೇತರಿಕೆ ಕಂಡಿದ್ದರೂ, ಬಿಸಿಸಿಐ ಅವರಿಗೆ ಬ್ಯಾಟಿಂಗ್ ಮಾಡಲು ಮಾತ್ರ ಅನುಮತಿ ನೀಡಿದೆ. ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ವೈದ್ಯಕೀಯ ಮತ್ತು ಕ್ರೀಡಾ ವಿಜ್ಞಾನ ತಂಡಗಳು, ಸಂಜು ಅವರು ವಿಕೆಟ್-ಕೀಪಿಂಗ್ ಪ್ರಾರಂಭಿಸುವ ಮೊದಲು ತಮ್ಮ ಬೆರಳುಗಳಿಗೆ ಸ್ವಲ್ಪ ವಿಶ್ರಾಂತಿ ನೀಡಬೇಕೆಂದು ಸೂಚಿಸಿದ್ದು, ಇದರಿಂದಾಗಿ ಅವರು ಮೊದಲ ಮೂರು ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕೇವಲ ಬ್ಯಾಟಿಂಗ್ ಮಾತ್ರ ಮಾಡಲಿದ್ದಾರೆ.
ಸಂಜು ಅವರ ಅನುಪಸ್ಥಿತಿಯಲ್ಲಿ, 23 ವರ್ಷದ ರಿಯಾನ್ ಪರಾಗ್ ಅವರು ತಂಡದ ಹಂಗಾಮಿ ನಾಯಕನಾಗಿ ಮುನ್ನಡೆಸಲಿದ್ದಾರೆ. ಅವರು ನಾಯಕನಾದರೆ, ವಿರಾಟ್ ಕೋಹ್ಲಿ ನಂತರ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ ಅತ್ಯಂತ ಕಿರಿಯ ನಾಯಕ ಎನಿಸಿಕೊಳ್ಳಲಿದ್ದಾರೆ.
ಯುವ ಆಲ್-ರೌಂಡರ್ ರಿಯಾನ್ ಪರಾಗ್ ಅವರ ನೇತೃತ್ವದಲ್ಲಿ ರಾಜಸ್ಥಾನ್ ತಂಡವು ಮಾರ್ಚ್ 23 ರಂದು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆರಂಭಿಕ ಪಂದ್ಯವನ್ನು ಆಡಲಿದೆ. ನಂತರ ಮಾರ್ಚ್ 26 ರಂದು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮತ್ತು ಮಾರ್ಚ್ 30 ರಂದು ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತವರಿನ ಪಂದ್ಯವನ್ನು ಆಡಲಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ರಾಯಲ್ಸ್ ತಂಡದ ಅವಿಭಾಜ್ಯ ಅಂಗವಾಗಿರುವ ಸಂಜು ಸ್ಯಾಮ್ಸನ್, ವಿಕೆಟ್-ಕೀಪಿಂಗ್ ಮತ್ತು ಫೀಲ್ಡಿಂಗ್‌ಗೆ ಅನುಮತಿ ಪಡೆಯುವವರೆಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಪ್ರಮುಖ ಕೊಡುಗೆ ನೀಡುವ ವಿಶ್ವಾಸವಿದೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅವರು ನಾಯಕನಾಗಿ ಮರಳುತ್ತಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.