ಲಕ್ನೋ: ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಐಪಿಎಲ್ 2025ರ ತಮ್ಮ ತಂಡದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ರೋಚಕ ಶತಕ ಗಳಿಸಿ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮಂಗಳವಾರ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂತ್, 54 ಎಸೆತಗಳಲ್ಲಿ ತಮ್ಮ ಎರಡನೇ ಐಪಿಎಲ್ ಶತಕವನ್ನು ಪೂರೈಸಿದರು.ಇದು ಅವರ ಪಾಲಿಗೆ ಅತ್ಯಂತ ಖುಷಿಯ ವಿಚಾರ. ಇಡಿ ಟೂರ್ನಿಯಲ್ಲಿ ಎದುರಿಸಿದ ಟೀಕೆಗಳಿಗೆ ಪ್ರತ್ಯುತ್ತರವೂ ಆಗಿದೆ.
When he hits, they stay as hit 😍
— IndianPremierLeague (@IPL) May 27, 2025
A 𝗣𝗮𝗻𝘁𝗮𝘀𝘁𝗶𝗰 𝘄𝗮𝘆 𝘁𝗼 𝗴𝗲𝘁 𝘁𝗼 𝗮 💯
Updates ▶ https://t.co/h5KnqyuYZE #TATAIPL | #LSGvRCB | @RishabhPant17 pic.twitter.com/Hka9HBgpFy
ಐಪಿಎಲ್ 2025ರ ಮೆಗಾ-ಹರಾಜಿನಲ್ಲಿ 27 ಕೋಟಿ ರೂಪಾಯಿಗೆ ಎಲ್‌ಎಸ್‌ಜಿ ತಂಡ ಸೇರಿದ್ದ ಪಂತ್, ಈ ಋತುವಿನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿದ್ದ ಅವರು, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ತಮ್ಮ ಕೌಶಲವನ್ನು ಮತ್ತೊಮ್ಮೆ ಪ್ರದರ್ಶಿಸಿದರು. 54 ಎಸೆತಗಳಲ್ಲಿ 10 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಶತಕ ಸಿಡಿಸಿದ ಅವರ ಆಟ, ಇತ್ತೀಚಿನ ಐಪಿಎಲ್ ವರ್ಷಗಳಲ್ಲಿ ಅವರ ಅತ್ಯುತ್ತಮ ಇನ್ನಿಂಗ್ಸ್ ಎನಿಸಿತು. ಇದಕ್ಕೂ ಮುನ್ನ, 2018ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 128 ರನ್‌ಗಳನ್ನು ಗಳಿಸಿದ್ದು. ಈ ವೇಳೆ ಅವರು ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ ಆಗಿದ್ದರು.
ಬ್ಯಾಕ್‌ಫ್ಲಿಪ್ ಸಂಭ್ರಮಾಚರಣೆ
ಶತಕ ಪೂರೈಸಿದ ನಂತರ, ರಿಷಭ್ ಪಂತ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಬ್ಯಾಕ್‌ಫ್ಲಿಪ್ ಮೂಲಕ ತಮ್ಮ ಸಂಭ್ರಮವನ್ನು ಆಚರಿಸಿದರು. ಈ ಆಚರಣೆಯು ಪಂತ್ ತಾವು ಇನ್ನೂ ಉತ್ತಮ ಫಾರ್ಮ್‌ನಲ್ಲಿದ್ದು, ತಾತ್ಕಾಲಿಕ ಫಾರ್ಮ್ ಕೊರತೆ ಎಂಬುದನ್ನು ಸೂಚಿಸುವಂತಿತ್ತು.
ರಿಷಭ್ ಪಂತ್ ಅಂತಿಮವಾಗಿ 61 ಎಸೆತಗಳಲ್ಲಿ ಅಜೇಯ 118 ರನ್‌ಗಳೊಂದಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. 11 ಬೌಂಡರಿಗಳು ಮತ್ತು 8 ಸಿಕ್ಸರ್‌ಗಳೊಂದಿಗೆ ಆಡಿದ ಅವರು, ಎಲ್‌ಎಸ್‌ಜಿ ತಂಡವನ್ನು 227 ರನ್‌ಗಳ ಬೃಹತ್ ಮೊತ್ತದತ್ತ ಕೊಂಡೊಯ್ದರು. ಈ ಶತಕದ ಮೂಲಕ ಪಂತ್, ಐಪಿಎಲ್ 2025ರಲ್ಲಿ 14 ಪಂದ್ಯಗಳಿಂದ 269 ರನ್‌ಗಳನ್ನು ಗಳಿಸಿದರು. 24.45 ಸರಾಸರಿ ಮತ್ತು 133.17 ಸ್ಟ್ರೈಕ್ ರೇಟ್ ಮೂಲಕ ಅವರ ಆಟದ ಅಂಕಿಅಂಶವನ್ನು ಗಣನೀಯವಾಗಿ ಹೆಚ್ಚಿಸಿತು.