ಬೆಂಗಳೂರು: ಅನುಭವಿ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ (Bhuvaneshwar Kumar) ಬುಧವಾರ (ಫೆಬ್ರವರಿ 4) ತಮ್ಮ 35ನೇ ಜನುಮದಿನ ಆಚರಿಸಿಕೊಂಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಈ ಬಾರಿ ಆರ್‌ಸಿಬಿ ತಂಡದ ಪರವಾಗಿ ಆಡಲಿದ್ದಾರೆ. ಐಪಿಎಲ್ ಟೂರ್ನಿ (IPL 2025)ಯ ಮೆಗಾ ಹರಾಜಿನಲ್ಲಿ 10.75 ಕೋಟಿ ರೂ.ಗಳಿಗೆ ಅವರು ಬೆಂಗಳೂರು ತಂಡ ಸೇರಿದ್ದಾರೆ.
ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಟೂರ್ನಿಯಲ್ಲಿ ಭುವನೇಶ್ವರ್ ಕುಮಾರ್, ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದಾರೆ. ಅವರು ಆರ್‌ಸಿಬಿಯಲ್ಲಿಯೂ ಹಲವಾರು ದಾಖಲೆಗಳನ್ನು ಮಾಡುವ ಅವಕಾಶ ಹೊಂದಿದ್ದಾರೆ. ಅಂಥ ದಾಖಲೆಗಳ ಬಗ್ಗೆ ಇಲ್ಲಿದೆ.
1.ಅತಿ ಹೆಚ್ಚು ವಿಕೆಟ್
ಐಪಿಎಲ್ ಟೂರ್ನಿಯಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 181 ವಿಕೆಟ್ ಉರುಳಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ (183) ನಂತರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಅವರು. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮೂರು ವಿಕೆಟ್ ಪಡೆದರೆ ಭುವಿ ವೇಗದ ಬೌಲರ್‌ಗಳ ಸಾಲಿನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಯುಜ್ವೇಂದ್ರ ಚಹಲ್ (205) ಹಾಗೂ ಪಿಯೂಷ್ ಚಾವ್ಲಾ (192) ಅಗ್ರಸ್ಥಾನದಲ್ಲಿದ್ದಾರೆ. ಆದರೆ 2025ರ ಐಪಿಎಲ್ ಟೂರ್ನಿಯಲ್ಲಿ ಪಿಯೂಷ್ ಚಾವ್ಲಾ ಐಪಿಎಲ್‌ನಲ್ಲಿ ಇಲ್ಲ. ಮುಂಬರುವ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಭುವಿ 12 ವಿಕೆಟ್ ಪಡೆದರೆ ಎರಡನೇ ಸ್ಥಾನಕ್ಕೇರಲಿದ್ದಾರೆ.
2.ಅತಿ ಹೆಚ್ಚು ಮೇಡನ್ ಓವರ್
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಬೌಲರ್ ಪ್ರವೀಣ್ ಕುಮಾರ್ ಹಾಗೂ ಹಾಲಿ ವೇಗಿ ಭುವನೇಶ್ವರ್ ಕುಮಾರ್ ತಲಾ 14 ಮೇಡನ್ ಓವರ್ ಎಸೆದು ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ವೇಗಿ ಒಂದು ಮೇಡನ್ ಓವರ್ ಮಾಡಿದರೆ ಅಗ್ರ ಸ್ಥಾನ ಭುವಿಗೆ ಸಿಗಲಿದೆ.
3.ಅತಿ ಹೆಚ್ಚು ಬಾರಿ ಐದು ವಿಕೆಟ್ ಸಾಧನೆ
ಐಪಿಎಲ್ ಇತಿಹಾಸದಲ್ಲಿ ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಜೇಮ್ಸ್ ಫಾಕ್ನರ್ ಹಾಗೂ ಜಯದೇವ್ ಉನಾದ್ಕಟ್ ಅವರು ಎರಡು ಬಾರಿ 5 ವಿಕೆಟ್ ಸಾಧನೆ ಮಾಡಿ ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಯ ಒಂದು ಪಂದ್ಯದಲ್ಲಿ ಭುವಿ ಒಮ್ಮೆ ಐದು ವಿಕೆಟ್ ಸಾಧನೆ ಮಾಡಿದರೆ 3 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ದಾಖಲೆ ಬರೆಯಲಿದ್ದಾರೆ. ಆದರೆ ಈ ದಾಖಲೆ ಬರೆಯಲು ಭುವಿ, ಮುಂಬೈ ಇಂಡಿಯನ್ಸ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಂದ ಪ್ರಬಲ ಪೈಪೋಟಿ ಎದುರಿಸಬೇಕಾಗಿದೆ. ಭುವನೇಶ್ವರ್ ಕುಮಾರ್ ಐಪಿಎಲ್ ಟೂರ್ನಿಯ ಎರಡು ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ.