ನವದೆಹಲಿ: ಕಳೆದ ವರ್ಷ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2025) ಮೆಗಾ ಹರಾಜಿನಲ್ಲಿ ಬಾಂಗ್ಲಾದೇಶ ತಂಡದ ಯಾವುದೇ ಆಟಗಾರನನ್ನು ಯಾವುದೇ ಫ್ರಾಂಚೈಸಿ ಬಾಂಗ್ಲಾದೇಶ ಕ್ರಿಕೆಟಿಗರನ್ನು ಖರೀದಿಸಿರಲಿಲ್ಲ. ಆದರೆ ಈಗ ಲಖನೌ ಸೂಪರ್ ಜಯಂಟ್ಸ್ ತಂಡ ಬಾಂಗ್ಲಾದೇಶ ತಂಡದ ವೇಗಿ ಟಾಸ್ಕಿನ್ ಅಹ್ಮದ್‌ಗೆ (Taskin Ahmed) ಅವಕಾಶ ನೀಡುವ ಭರವಸೆಯನ್ನು ನೀಡಿದೆ. ಗಾಯಾಳು ಆಟಗಾರರ ಬದಲಿಗೆ ಟಾಸ್ಕಿನ್ ಅಹ್ಮದ್‌ಗೆ 2025ರ ಐಪಿಎಲ್ ಟೂರ್ನಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬಾಂಗ್ಲಾ ವೇಗಿ ಮುಸ್ತಾಫಿಝರ್ ರೆಹಮಾನ್ ಆಡಿದ್ದರು. ಆದರೆ, ಮೆಗಾ ಹರಾಜಿಗೂ ಮುನ್ನ ಅವರನ್ನು ರಿಲೀಸ್ ಮಾಡಿತ್ತು. ಲಿಟನ್ ದಾಸ್ ಹಾಗೂ ಶಕಿಬ್ ಅಲ್ ಹಸನ್ ಐಪಿಎಲ್ ಆಡಿದ ಇತರೆ ಆಟಗಾರರಾಗಿದ್ದಾರೆ. ಇದೀಗ ಟಾಸ್ಕಿನ್ ಅಹ್ಮದ್ ಅವರು ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡುವ ಹಂತದಲ್ಲಿದ್ದಾರೆ.
ವೇಗದ ಬೌಲರ್ ಮಯಾಂಕ್ ಯಾದವ್ ಹಾಗೂ ಮೊಹ್ಸಿನ್ ಖಾನ್ ಅವರು ಗಾಯದ ಸಮಸೆಯಿಂದ ಬಳಲುತ್ತಿದ್ದಾರೆ. ಇದು ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ತಲೆ ನೋವಾಗಿದೆ. ಟಿ20 ಪಂದ್ಯದಲ್ಲಿ 7 ವಿಕೆಟ್ ಸಾಧನೆ ಮಾಡಿದ ಮೂವರು ಬೌಲರ್‌ಗಳ ಸಾಲಿನಲ್ಲಿ ಟಾಸ್ಕಿನ್ ಅಹ್ಮದ್ ಕೂಡ ಒಬ್ಬರು. ಲಖನೌ ಸೂಪರ್ ಜಯಂಟ್ಸ್ ತಂಡದಿಂದ ಕರೆ ಬಂದರೆ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ತಮಗೆ ಎನ್‌ಒಸಿ ನೀಡಲಿದೆ ಎಂಬ ಭರವಸೆಯನ್ನು ಟಾಸ್ಕಿಣ್ ಅಹ್ಮದ್ ಹೊಂದಿದ್ದಾರೆ.
“ದೊಡ್ಡ ಟೂರ್ನಿಗಳಲ್ಲಿ ಅನೇಕ ಆಟಗಾರರನ್ನು ಬದಲಿ ಆಟಗಾರರನ್ನಾಗಿ ಕರೆ ತರಲಾಗುತ್ತದೆ. ಈ ನಿಟ್ಟಿನಲ್ಲಿ ಲಖನೌ ಸೂಪರ್ ಜಯಂಟ್ಸ್ ನನ್ನನ್ನು ಸಂಪರ್ಕಿಸಿತ್ತು. ನೀವು ಲಭ್ಯವಿದ್ದರೆ ಬದಲಿ ಆಟಗಾರನಾಗಿ ನಿಮ್ಮನ್ನು ಪರಿಗಣಿಸುತ್ತೇವೆ ಎಂದು ಅವರು ನನಗೆ ತಿಳಿಸಿದ್ದಾರೆ. ಬದಲಿ ಆಟಗಾರನನ್ನಾಗಿ ನನ್ನುನ್ನು ಆಯ್ಕೆ ಮಾಡಿದರೆ, ನಿಮಗೆ ಎನ್‌ಒಸಿ ಸಿಗಲಿದೆಯೆ ಎಂಬುದನ್ನು ಕೂಡ ಅವರು ಪರಿಶೀಲಿಸಿದ್ದಾರೆ,” ಎಂದು ಶುಕ್ರವಾರ ಬಾಂಗ್ಲಾದೇಶ ಸುದ್ದಿಗಾರರಿಗೆ ಟಾಸ್ಕಿನ್ ಅಹ್ಮದ್ ಮಾಹಿತಿ ನೀಡಿದ್ದರು.
ನಾನು ಫಿಟ್
“ಅವರಿಗೆ ನನ್ನ ಅಗತ್ಯವಿದೆಯೇ? ಎಂಬುದು ಇಲ್ಲಿ ಮೊದಲ ಸಂಗತಿಯಾಗಿದೆ. ಯಾರಿಗಾದರೂ ನನ್ನ ಅಗತ್ಯವಿದ್ದರೆ ಹಾಗೂ ನಾನು ಸಂಪೂರ್ಣವಾಗಿ ಫಿಟ್ ಇದ್ದರೆ, ಆಗ ನಾನು ಎನ್‌ಒಸಿ ಪಡೆಯಲು ಮನವಿ ಮಾಡಬಹುದು. ನಾನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಜೊತೆ ಮಾತನಾಡಿದ್ದೇನೆ. ನನಗೆ ಐಪಿಎಲ್ ಆಡಲು ಕರೆ ಬಂದರೆ, ಎನ್‌ಒಸಿ ಪಡೆಯಲು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಾನು ಚರ್ಚೆಯನ್ನು ನಡೆಸಿದ್ದೇನೆ.” ಎಂದು ಬಾಂಗ್ಲಾ ವೇಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಲಖನೌ ಸೂಪರ್ ಜಯಂಟ್ಸ್ ತಂಡದಲ್ಲಿ ರಾಜ್ವರ್ಧನ್ ಹಂಗರೇಕರ್, ಶಮರ್ ಜೋಸೆಪ್ ಹಾಗೂ ಆವೇಶ್ ಖಾನ್ ಇದ್ದಾರೆ. ಮಾರ್ಚ್ 24 ರಂದು ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜಯಂಟ್ಸ್ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ.