ನವದೆಹಲಿ: ಕಳೆದ ಆರು ತಿಂಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಹೂಡಿಕೆ ವಂಚನೆ ಜಾಲಕ್ಕೆ 30,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಒಟ್ಟು 1,500 ಕೋಟಿ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿ-ಎನ್‌ಸಿಆರ್ ನಗರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಅತಿ ಹೆಚ್ಚು ಆರ್ಥಿಕ ನಷ್ಟ ಅನುಭವಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಸೈಬರ್ ವಿಭಾಗದ ವರದಿ ಬಹಿರಂಗಪಡಿಸಿದೆ.
ಬೆಂಗಳೂರಿಗೆ ಅತಿ ದೊಡ್ಡ ಹೊಡೆತ
ವರದಿಯ ಪ್ರಕಾರ, ವಂಚನೆಗೊಳಗಾದ ಒಟ್ಟು ಮೊತ್ತದಲ್ಲಿ ಬೆಂಗಳೂರು ಒಂದೇ ಶೇ. 26.38ರಷ್ಟು ಪಾಲು ಹೊಂದುವ ಮೂಲಕ ಅತಿ ಹೆಚ್ಚು ಆರ್ಥಿಕ ಹಾನಿಗೊಳಗಾದ ನಗರ ಎಂಬ ಕುಖ್ಯಾತಿ ಪಡೆದಿದೆ. ದೆಹಲಿಯಲ್ಲಿ ತಲಾ ವಂಚನೆ ಪ್ರಮಾಣ ಹೆಚ್ಚಿದ್ದು, ಪ್ರತಿಯೊಬ್ಬ ಸಂತ್ರಸ್ತರೂ ಸರಾಸರಿ 8 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ನಗರಗಳು ಸೈಬರ್ ವಂಚಕರ ಪ್ರಮುಖ ಹಾಟ್‌ಸ್ಪಾಟ್‌ಗಳಾಗಿವೆ.

ದುಡಿಯುವ ವರ್ಗವೇ ವಂಚಕರ ಗುರಿ
ವಂಚನೆಗೆ ಒಳಗಾದವರಲ್ಲಿ ಶೇ.76ಕ್ಕೂ ಹೆಚ್ಚು ಮಂದಿ 30 ರಿಂದ 60 ವರ್ಷ ವಯಸ್ಸಿನ ದುಡಿಯುವ ವರ್ಗದವರಾಗಿದ್ದಾರೆ. ಹಣಕಾಸಿನ ಗುರಿಗಳನ್ನು ಹೊಂದಿರುವ ಈ ಜನರನ್ನು ಗುರಿಯಾಗಿಸಿಕೊಂಡು ವಂಚಕರು ಬಲೆ ಬೀಸುತ್ತಿದ್ದಾರೆ. ಹಿರಿಯ ನಾಗರಿಕರೂ ಸಹ ವಂಚಕರ ಗುರಿಯಾಗಿದ್ದು, 60 ವರ್ಷ ಮೇಲ್ಪಟ್ಟ ಸುಮಾರು 2,829 ಮಂದಿ (ಶೇ.8.62) ಮೋಸ ಹೋಗಿದ್ದಾರೆ. ಪ್ರತಿಯೊಬ್ಬ ಸಂತ್ರಸ್ತರೂ ಸರಾಸರಿ 51.38 ಲಕ್ಷ ರೂ. ಕಳೆದುಕೊಂಡಿರುವುದು ವಂಚನೆಯ ತೀವ್ರತೆಯನ್ನು ತೋರಿಸುತ್ತದೆ.
ವಂಚನೆಗೆ ಬಳಕೆಯಾಗುವ ವೇದಿಕೆಗಳು
ಸೈಬರ್ ಅಪರಾಧಿಗಳು ಹೆಚ್ಚಾಗಿ ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಂನಂತಹ ಮೆಸೇಜಿಂಗ್ ಆ್ಯಪ್‌ಗಳನ್ನು ಬಳಸುತ್ತಿದ್ದಾರೆ. ಸುಮಾರು ಶೇ.20ರಷ್ಟು ಪ್ರಕರಣಗಳು ಈ ಆ್ಯಪ್‌ಗಳ ಮೂಲಕವೇ ನಡೆದಿವೆ. ಆದರೆ, ಲಿಂಕ್ಡ್‌ಇನ್ ಮತ್ತು ಟ್ವೀಟರ್‌ನಂತಹ ವೃತ್ತಿಪರ ಸಾಮಾಜಿಕ ಜಾಲತಾಣಗಳನ್ನು ಬಳಸಿರುವುದು ಕೇವಲ ಶೇ. 0.31ರಷ್ಟು ಮಾತ್ರ. ಆತಂಕಕಾರಿ ವಿಷಯವೆಂದರೆ, ಶೇ. 41.87ರಷ್ಟು ಪ್ರಕರಣಗಳು “ಇತರೆ” ಎಂದು ವರ್ಗೀಕರಿಸಲ್ಪಟ್ಟಿರುವ, ಇನ್ನೂ ಗುರುತಿಸಲಾಗದ ವೇದಿಕೆಗಳ ಮೂಲಕ ನಡೆದಿವೆ ಎಂದು ವರದಿ ತಿಳಿಸಿದೆ.



















