ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹೊಸ ಮ್ಯೂಚುವಲ್ ಫಂಡ್ ಎಸ್ಐಪಿ ಆರಂಭಿಸಿದ್ದು, ಸಣ್ಣ ಪ್ರಮಾಣದ ಹೂಡಿಕೆದಾರರಿಗೆ ಭಾರಿ ಅನುಕೂಲವಾಗಲಿದೆ. ಜನ್ ನಿವೇಶ್ ಎಸ್ಐಪಿ (JanNivesh SIP) ಎಂಬ ಹೊಸ ಯೋಜನೆಯನ್ನು ಎಸ್ ಬಿಐ ಪರಿಚಯಿಸಿದೆ. ಹೊಸ ಯೋಜನೆ ಅನ್ವಯ ಜನ ಮಾಸಿಕ 250 ರೂ. ಎಸ್ಐಪಿ ಕಟ್ಟುವ ಮೂಲಕ ಸಣ್ಣ ಪ್ರಮಾಣದಿಂದ ಹೂಡಿಕೆ ಆರಂಭಿಸಿ, ದೊಡ್ಡ ಮೊತ್ತದ ಗಳಿಕೆ ಮಾಡಬಹುದಾಗಿದೆ.
ಎಸ್ ಬಿಐ ಮ್ಯೂಚುವಲ್ ಫಂಡ್ ಮತ್ತು ಎಸ್ ಬಿಐ ಬ್ಯಾಂಕ್ ಸಹಯೋಗದೊಂದಿಗೆ ಗ್ರಾಮೀಣ ಭಾಗದ ಜನ, ಸಾಮಾನ್ಯ ಜನ, ಮಧ್ಯಮ ವರ್ಗದ ಜನ ಹಾಗೂ ಸಣ್ಣ ಮೊತ್ತದ ಹೂಡಿಕೆ ಮಾಡುವಂತಹ ಜನರನ್ನು ಸೆಳೆಯಲು ಎಸ್ಐಪಿ ಯೋಜನೆಯನ್ನು ಪರಿಚಯಿಸಲಾಗಿದೆ. ಪ್ರತಿ ದಿನ ಕೂಲಿ ಕೆಲಸ ಮಾಡುವವರು, ಸಣ್ಣ ಉದ್ಯಮ ಹೊಂದಿರುವವರು ಸೇರಿ ಕಡಿಮೆ ಆದಾಯದ ಜನ ಹೆಚ್ಚಿನ ಹಣ ಉಳಿಸಲು ಇದು ಸಹಾಯವಾಗಲಿದೆ.
ಹೂಡಿಕೆ ಮಾಡುವುದು ಹೇಗೆ?
SBI YONO ಅಪ್ಲಿಕೇಶನ್, Paytm, Groww, Zerodhaನಂತಹ ಬ್ರೋಕರೇಜ್ ಪ್ಲಾಟ್ ಫಾರ್ಮ್ ಗಳಿಗೆ ಲಾಗಿನ್ ಆಗಬೇಕು. ಆಗ ಅಲ್ಲಿ, JanNivesh SIP ಆಯ್ಕೆ ಆರಿಸಿಕೊಂಡು, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ 250 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಬಹುದಾಗಿದೆ. ಅದರಲ್ಲಿ ದಿನ, ವಾರದ ಅಥವಾ ಮಾಸಿಕ ಹೂಡಿಕೆ ಆಯ್ಕೆಯನ್ನು ಆರಿಸಿ ಮತ್ತು ನಿಮ್ಮ SIP ಟ್ರ್ಯಾಕ್ ಮಾಡಿಕೊಳ್ಳಬಹುದು.
ಮಕ್ಕಳ ಭವಿಷ್ಯಕ್ಕೂ ಬುನಾದಿ
ಮನೆಯಲ್ಲಿ ಮಕ್ಕಳು ಇದ್ದರೆ, ಅವರ ಭವಿಷ್ಯಕ್ಕಾಗಿ ಹೂಡಿಕೆ ಮಾಡಬೇಕು ಎಂದಿದ್ದರೆ ಜನ್ ನಿವೇಶ್ ಎಸ್ಐಪಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಪ್ರತಿ ತಿಂಗಳು 25 ವರ್ಷಗಳವರೆಗೆ ನೀವು 250 ರೂಪಾಯಿಯನ್ನು ಎಸ್ಐಪಿ ಕಟ್ಟಿದರೆ, ಹೂಡಿಕೆಯ ಮೊತ್ತವು 75 ಸಾವಿರ ರೂ. ಆಗುತ್ತದೆ. ಶೇ.12ರಷ್ಟು ರಿಟರ್ನ್ಸ್ ಎಂದುಕೊಂಡರೂ ಒಟ್ಟು 4.74 ಲಕ್ಷ ರೂ. ಸಿಗಲಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಎಸ್ಐಪಿಗಳು ಕೂಡ ರಿಸ್ಕ್ ಹೊಂದಿರುತ್ತವೆ. ನಾವು ಎಸ್ ಬಿಐ ಜಾರಿಗೆ ತಂದಿರುವ ಯೋಜನೆ ಕುರಿತು ನಿಮಗೆ ಮಾಹಿತಿ ನೀಡಿದ್ದೇವೆ ಅಷ್ಟೆ. ಇದು ಎಸ್ಐಪಿ ಮಾಡಲು ಶಿಫಾರಸು ಖಂಡಿತ ಅಲ್ಲ, ಹೂಡಿಕೆ ಮಾಡುವ ಮುನ್ನು ಆರ್ಥಿಕ ತಜ್ಞರ ಸಲಹೆ ಪಡೆಯುವುದನ್ನು ಮರೆಯದಿರಿ.