ಲೋಕಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ವಿಧೇಯಕ ಮಂಡನೆಯಾಗಿದೆ. ಈ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷಗಳ ಮಧ್ಯ ಟಾಕ್ ವಾರ್ ನಡೆಯುತ್ತಿದೆ. ಜನಕಲ್ಯಾಣದ ರೂವಾರಿಯನ್ನು ಆಯ್ಕೆ ಮಾಡುವ ಚುನಾವಣೆಗಳೇ ಜನಕಲ್ಯಾಣದ ಸಂಕಲ್ಪ ಈಡೇರಿಸಲು ಅಡ್ಡಿಯಾಗುತ್ತಿವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಒಂದು ರಾಷ್ಟ್ರ ಒಂದು ಚುನಾವಣೆಯ ಕಲ್ಪನೆಯ ಹಿಂದೆ ಬಿದ್ದಿದೆ. ಹಾಗಾದರೆ, ಅದರಿಂದ ಆಗುವ ಲಾಭಗಳೇನು? ನಷ್ಟವೇನು?
ಭಾರತದಲ್ಲಿ 1967ರ ಚುನಾವಣೆ ಮುಗಿಯುವವರೆಗೂ ಒಂದು ರಾಷ್ಟ್ರ ಒಂದು ಚುನಾವಣೆ ಎಂಬ ಪರಿಕಲ್ಪನೆ ಚಾಲ್ತಿಯಲ್ಲಿತ್ತು. ಆದರೆ, ಆನಂತರ ಭಾಷಾವಾರು ರಾಜ್ಯಗಳ ವಿಂಗಡನೆ ಸೇರಿದಂತೆ ಹಲವು ಕಾರಣಗಳಿಂದ ಕೆಲವು ರಾಜ್ಯಗಳಲ್ಲಿ ಅವಧಿಗೂ ಮುನ್ನ ಚುನಾವಣೆಗಳು ನಡೆದವು. ಆಗಿನಿಂದ ಒಂದು ರಾಷ್ಟ್ರ ಹಲವು ಚುನಾವಣೆಗಳು ದೇಶದಲ್ಲಿ ಚಾಲ್ತಿಗೆ ಬಂದವು.
‘ಒಂದು ರಾಷ್ಟ್ರ, ಒಂದು ಚುನಾವಣೆಯ ಪರಿಕಲ್ಪನೆ ಕೂಡ ಎರಡೂ ಬದಿಯ ವಾದಗಳಿಗೆ ತೆರೆದುಕೊಂಡಿದೆ. ರಾಜಕೀಯ ಸ್ಥಿರತೆ ಮತ್ತು ಆಡಳಿತದಲ್ಲಿ ದಕ್ಷತೆ ತರಲು ಇದು ಅನುಕೂಲ ಎಂದು ಒಂದು ಬದಿಯ ವಾದವಾಗಿದ್ದರೆ, ರಾಜ್ಯಗಳ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುತ್ತವೆ. ಕೇಂದ್ರ ಸರ್ಕಾರದ ಚುನಾವಣೆಯ ಕೇಂದ್ರ ಬಿಂದುವಿನಲ್ಲೇ ಚುನಾವಣೆಗಳು ಜರುಗುತ್ತವೆ. ರಾಜ್ಯಗಳು ಬಲಿಯಾಗುತ್ತವೆ ಎನ್ನುವುದು ಇನ್ನೊಂದು ಬದಿಯ ವಾದವಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಈಗ ಇದು ಕೂಡ ಒಂದಾಗುತ್ತಿದೆ. ದೇಶದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವ, ಪದೇ ಪದೇ ಚುನಾವಣೆಗಳು ನಡೆಯುವುದಕ್ಕೆ ತಡೆ ಒಡ್ಡುವ ಹಾಗೂ ಸಮಯ, ಹಣ ಸೇರಿದಂತೆ ಸಂಪನ್ಮೂಲಗಳನ್ನು ಉಳಿಸುವ ಗುರಿ ಇದರ ಹಿಂದಿದೆ.
ಹೀಗಾಗಿ ಒಂದು ರಾಷ್ಟ್ರ ಒಂದು ಚುನಾವಣೆಯ ಸಾಧಕ-ಬಾಧಕಗಳ ಕುರಿತು ಕೇಂದ್ರ ಸರಕಾರ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆಯನ್ನೂ ನೀಡಿದೆ.
ಕೋವಿಂದ್ ಸಮಿತಿಯ ಪ್ರಮುಖ ಶಿಫಾರಸ್ಸುಗಳೇನು?
- ‘ಒಂದು ದೇಶ, ಒಂದು ಚುನಾವಣೆ’ ಎರಡು ಹಂತಗಳಲ್ಲಿ ನಡೆಸಬೇಕು
- ಲೋಕಸಭೆ ಮತ್ತು ರಾಜ್ಯಸಭೆಗೆ ಒಂದೇ ಹಂತದಲ್ಲಿ ಚುನಾವಣೆ
- ಎರಡನೇ ಹಂತದಲ್ಲಿ ಪುರಸಭೆ ಮತ್ತು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ
- ಭಾರತೀಯ ಚುನಾವಣಾ ಆಯೋಗದ ಸಹಯೋಗದಲ್ಲಿ ಒಂದೇ ಮತದಾರ ಪಟ್ಟಿ ರಚಿಸಲು ಶಿಫಾರಸು
- 2029ಕ್ಕೆ ಲೋಕಸಭೆ, ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಬೇಕು
- 2024 ಮತ್ತು 2028ರ ನಡುವೆ ರಚನೆಯಾಗುವ ರಾಜ್ಯ ಸರ್ಕಾರಗಳ ಅಧಿಕಾರಾವಧಿಯನ್ನು 5 ವರ್ಷದೊಳಗೆ ಮೊಟಕುಗೊಳಿಸಬೇಕು
- ಅತಂತ್ರ ಸರ್ಕಾರ, ಸರ್ಕಾರ ಪತನವಾದರೆ ಮತ್ತೊಮ್ಮೆ ಚುನಾವಣೆ ನಡೆಸಬೇಕು. ಆದರೆ, ಸರ್ಕಾರದ ಅಧಿಕಾರಾವಧಿ ಮಾತ್ರ ಹಿಂದೆ ರಚನೆಯಾಗಿದ್ದ ಸರ್ಕಾರದ ಅವಧಿಯಲ್ಲೇ ಮುಕ್ತಾಯವಾಗಬೇಕು
ಕೇಂದ್ರ ಸಚಿವ ಸಂಪುಟ ಈ ವಿಷಯವನ್ನು ಅಂಗೀಕಾರಗೊಳಿಸಿದರೂ ಕಾರ್ಯರೂಪಕ್ಕೆ ಬರುವುದು ಕಷ್ಟ ಎನ್ನಲಾಗುತ್ತಿದೆ. ಸಂವಿಧಾನಕ್ಕೆ ತಿದ್ದುಪಡಿ ಹಾಗೂ ರಾಜಕೀಯ ಒಮ್ಮತ ತುಂಬಾ ಅಗತ್ಯವಾಗಿದೆ. ಆದರೆ, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಈ ವಿಷವನ್ನು ಪ್ರಸ್ತಾಪಿಸುತ್ತಲೇ ಇದ್ದರು. ಈಗ ಕೋವಿಂದ್ ಸಮಿತಿಯು ಈ ವಿಚಾರಕ್ಕೆ ಸಂಬಂಧಿಸಿದಂತೆ 18 ಸಂವಿಧಾನ ತಿದ್ದುಪಡಿಗಳ ಕುರಿತು ಸೂಚಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿಯೇತರ ಸರ್ಕಾರಗಳಿದ್ದ ರಾಜ್ಯಗಳು ಹಾಗೂ ವಿಪಕ್ಷಗಳು ವಿರೋಧಿಸುತ್ತಿವೆ. ಇದು ಪ್ರಜಾಪ್ರಭುತ್ವದ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಬಹುದು. ರಾಜಕೀಯ ಕಾರಣಗಳಿಗಾಗಿ ವಿಧಾನಸಭೆಯನ್ನು ವಿಸರ್ಜಿಸಿದರೂ ಮುಂದಿನ ಅವಧಿಯವರೆಗೆ ಚುನಾವಣೆಗಾಗಿ ಕಾಯಬೇಕಾಗಿ ಬರಬಹುದು. ಒಕ್ಕೂಟ ವ್ಯವಸ್ಥೆಗೆ ಹೊಡೆತ ಬೀಳಬಹುದು. ಬೃಹತ್ ಜನಸಂಖ್ಯೆಯುಳ್ಳ ದೇಶಕ್ಕೆ ಇದು ಕಾರ್ಯಸಾಧುವಲ್ಲ ಎಂದು ವಿರೋಧಿಸುತ್ತಿವೆ. ಕಾಂಗ್ರೆಸ್ ಸೇರಿದಂತೆ 15 ವಿಪಕ್ಷಗಳು ಈ ವಾದ ಮುಂದಿಡುತ್ತಿವೆ.
ದೇಶದ ಸಂವಿಧಾನವು ದೇಶದ ವಿಭಿನ್ನ ರಾಜ್ಯಗಳಿಗೆ ವಿಶೇಷ ಹಕ್ಕುಗಳನ್ನು ನೀಡಿದೆ. ಪ್ರತಿ ರಾಜ್ಯವು ತನ್ನ ಪ್ರಾದೇಶಿಕ ತಾತ್ಕಾಲಿಕ ಸಮಸ್ಯೆಗಳ ಮೇಲೆ ಚುನಾವಣೆ ನಡೆಸುತ್ತವೆ. ಒಂದೇ ಚುನಾವಣಾ ವ್ಯವಸ್ಥೆ ಜಾರಿಯಾದರೆ, ದೇಶದ ಯಾವುದೇ ರಾಜ್ಯದ ಸಮಸ್ಯೆಗಳನ್ನು ಸಮರ್ಥವಾಗಿ ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ರಾಜ್ಯ ತನ್ನದೆಯಾದ ಭಾಷೆ, ಸಂಸ್ಕೃತಿ, ಮತ್ತು ರಾಜಕೀಯ ಪ್ರಯೋಗಗಳನ್ನು ಹೊಂದಿದೆ. ಪ್ರಾದೇಶಿಕ ಪಕ್ಷಗಳು ಮತ್ತು ವಿಷಯಗಳನ್ನು ರಾಷ್ಟ್ರೀಯ ವಿಚಾರಗಳ ಹಿಂದೆ ಒತ್ತಡಗೊಳಿಸಲಾಗುತ್ತದೆ. ಇದರಿಂದ ಆ ರಾಜ್ಯಗಳ ನಿಜವಾದ ಸಮಸ್ಯೆಗಳು ಮತ್ತು ಬೇಡಿಕೆಗಳು ಕಡೆಗಣಿಸಲ್ಪಡುತ್ತವೆ. ಇಷ್ಟು ದೊಡ್ಡ ದೇಶ ರಾಷ್ಟ್ರೀಕೃತವಾಗಿ ನಿಲ್ಲುವುದೇ ಒಂದು ದೊಡ್ಡ ಸಮಸ್ಯೆ. ಅಂತಹದ್ದರಲ್ಲಿ ರಾಜಕೀಯ ಆಯ್ಕೆಯು ರಾಷ್ಟ್ರೀಕರಣಗೊಂಡರೆ ಸಮಾಜದಲ್ಲಿ ಅಸಮಾನತೆ ತಲೆದೋರುತ್ತದೆ ಎಂಬ ಭಯ ಹಲವರನ್ನು ಕಾಡುತ್ತಿದೆ.
ರಾಜ್ಯಗಳ ದಾರಿದ್ರ್ಯ, ಸ್ವಾಯತ್ತತೆ ಕುಗ್ಗುವ ಭಯ!
ನೀರಾವರಿ ಸಮಸ್ಯೆಗಳು, ಬಡತನ ಸಮಸ್ಯೆಗಳು, ನಕ್ಸಲ್ ಸಮಸ್ಯೆ, ಪ್ರತ್ಯೇಕತಾವಾದ, ಪ್ರದೇಶವಾರು ಅಸಮಾನತೆ ವಿಷಯಗಳು ಪರಿಹಾರ ಕಾಣುವುದು ಕಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ನಾಯಕತ್ವದ ಮುಂದೆ ತಮ್ಮ ಜವಾಬ್ದಾರಿಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.ಅಥವಾ ಪ್ರಾದೇಶಿಕ ಪಕ್ಷಗಳೇ ಇಲ್ಲದಂತಾದರೂ ಅಚ್ಚರಿ ಪಡಬೇಕಿಲ್ಲ. ಒಂದು ರಾಜ್ಯದ ಆಡಳಿತದ ಅವಧಿ ಮುಗಿದಾಗ, ಅದು ತನ್ನ ಪ್ರಾದೇಶಿಕ ಚುನಾವಣೆಯನ್ನು ನಡೆಸಿ ನೂತನ ಸರ್ಕಾರವನ್ನು ಆಯ್ಕೆ ಮಾಡುತ್ತದೆ. ರಾಜ್ಯ ಚುನಾವಣೆಗಳು ಆಯಾ ರಾಜ್ಯದ ಸಮಸ್ಯೆಗಳ ಮೇಲೆ ನಡೆಯಬೇಕೇ ವಿನಾ, ಕಾಶ್ಮೀರದ ಸಮಸ್ಯೆ, ಪಾಕಿಸ್ತಾನದ ಭಯ, ಚೀನಾದ ಗಡಿ ವಿವಾದದ ಮೇಲೆ ಚುನಾವಣೆಗಳು ನಡೆದರೆ ದೇಶವು ಹಿಂದೆಂದೂ ಕೇಳರಿಯದ ದಾರಿದ್ರ್ಯದಲ್ಲಿ ಬೀಳಬೇಕಾಗುತ್ತದೆ. ರಾಜ್ಯಗಳಲ್ಲಿ ಅರಾಜಕತೆ ಹೆಚ್ಚಾಗಿ ದೇಶವು ಒಕ್ಕೂಟದ ಭುನಾದಿ ಬೂದಿಯಾಗುತ್ತದೆ.
ಪ್ರಾದೇಶಿಕ ಸಮಸ್ಯೆಗಳು ಮತ್ತು ವಿಷಯಗಳು, ರಾಷ್ಟ್ರದ ರಾಷ್ಟ್ರೀಯತೆಯ ವಿಚಾರಗಳಲ್ಲಿ-ವಿಷಯಗಳಲ್ಲಿ ಮರೆಯಾಗಿ ಬಿಡುತ್ತವೆ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಾನೂನು ರೂಪಿಸುವ ಅವಕಾಶ ಕಳೆದು ಹೋಗುತ್ತದೆ.
ರಾಜ್ಯಗಳು ಕೇಂದ್ರದ ನೆರವಿನಿಂದ, ಜೊತೆಗೆ ತನ್ನದೇ ಆದ ಅಭಿವೃದ್ದಿ ಮತ್ತು ಆಡಳಿತ ಕ್ರಮಗಳನ್ನು ರೂಪಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತವೆ. “ಒಂದು ರಾಷ್ಟ್ರ, ಒಂದು ಚುನಾವಣೆ” ಎಂಬ ಪ್ರಸ್ತಾಪ ಕೇಂದ್ರಕ್ಕೆ ಹೆಚ್ಚಿನ ಶಕ್ತಿ ನೀಡುತ್ತದೆ ಮತ್ತು ರಾಜ್ಯಗಳ ಸ್ವಾಯತ್ತತೆ ಕುಗ್ಗಿಸಬಹುದು. ರಾಜ್ಯಗಳ ಸಂವಿಧಾನಿಕ ಹಕ್ಕುಗಳು, ವೈವಿಧ್ಯತೆ, ಮತ್ತು ಪ್ರಾದೇಶಿಕ ಸಮಸ್ಯೆಗಳು ಮಹತ್ವವನ್ನು ಕಳೆದುಕೊಳ್ಳುವ ಅಪಾಯ ಹೆಚ್ಚಾಗಿದೆ. ಇದರಿಂದ ಅಂತಃಕಲಹಗಳು ಹೆಚ್ಚಾಗಿ ಒಕ್ಕೂಟ ಛಿದ್ರವಾಗುವ ಅಪಾಯ ಹೆಚ್ಚಾಗಿ ಕಾಣಸಿಗುತ್ತದೆ.
ಸದ್ಯದ ಸ್ಥಿತಿಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿ ಮಾಡುವುದು ಬಿಜೆಪಿಗೆ ಸಾಧ್ಯವೇ?
ಎನ್ ಡಿಎ ಸಂಸತ್ ನ ಎರಡೂ ಸದನಗಳಲ್ಲಿ ಸರಳ ಬಹುಮತ ಹೊಂದಿದೆ. ಸಹಜವಾಗಿ ಮೂರನೇ ಎರಡರಷ್ಟು ಬಹುಮತದ ಸಮ್ಮತಿ ಸಿಗುವುದು ಕಷ್ಟವಾಗುತ್ತದೆ. ರಾಜ್ಯಸಭೆಯ ಒಟ್ಟು 245 ಸ್ಥಾನಗಳ ಪೈಕಿ ಎನ್‌ಡಿಎ 112 ಸ್ಥಾನಗಳನ್ನು ಹೊಂದಿದೆ. ವಿಪಕ್ಷಗಳು 85 ಸ್ಥಾನಗಳಲ್ಲಿವೆ. ಮೂರನೇ ಎರಡರಷ್ಟು ಬಹುಮತಸಿಗಬೇಕೆಂದರೆ ರಾಜ್ಯಸಭೆಯಲ್ಲಿ ಸರ್ಕಾರಕ್ಕೆ 164 ಸದಸ್ಯರ ಬೆಂಬಲ ಬೇಕಾಗುತ್ತದೆ. ಲೋಕಸಭೆಯಲ್ಲೂ ಎನ್ ಡಿಎ ಕತೆ ಇದೇ ಆಗಿದೆ. ಲೋಕಸಭೆಯ ಒಟ್ಟು 545 ಸ್ಥಾನಗಳ ಪೈಕಿ ಎನ್‌ಡಿಎ ಕೇವಲ 292 ಸ್ಥಾನಗಳನ್ನು ಹೊಂದಿದೆ. ಮೂರನೇ ಎರಡರಷ್ಟು ಬಹುಮತ ಬೇಕೆಂದರೆ 364 ಸದಸ್ಯರ ಬಲ ಬೇಕು. ಅಲ್ಲದೇ, ಮೂರನೇ ಎರಡರಷ್ಟು ಬಹುಮತವನ್ನು ಆ ದಿನ ಸದನದಲ್ಲಿ ಹಾಜರು ಇರುವ ಸದಸ್ಯರ ತಲೆ ಎಣಿಕೆ ಮಾಡಿ ನಿರ್ಧರಿಸಲಾಗುತ್ತದೆ. ಸದಸ್ಯರ ಗೈರು ಹಾಜರಾತಿ ಪ್ರಮಾಣ ಹೆಚ್ಚಾದಷ್ಟೂ ಮೂರನೇ ಎರಡರಷ್ಟು ಮ್ಯಾಜಿಕ್ ನಂಬರ್ ಸಿಗಬಹುದು. ಒಂದು ವೇಳೆ ಎಲ್ಲ ವಿರೋಧಗಳನ್ನು ಮೀರಿಯೂ ಸಫಲತೆ ಕಂಡರೆ, ಈ ಯೋಜೆ ಜಾರಿಯಾಗುವುದು ಮಾತ್ರ 2029ಕ್ಕೆ. ಆದರೆ, ಹಣ, ಸಮಯದ ಉಳಿತಾಯದ ಮಧ್ಯೆ ರಾಜ್ಯಗಳ ಅಸ್ತಿತ್ವ ಮಾತ್ರ ದಾರಿದ್ರ್ಯದ ಹಾದಿ ಹಿಡಿಯದಿರಲಿ. ….