ಬೆಳಗಾವಿ: ರಾಜಕಾರಣದಲ್ಲಿ ಇರಬೇಕು ಅಂದರೆ, ರಾಜಕೀಯವನ್ನು ಮಾಡಲೇಬೇಕು. ಹೀಗಾಗಿ, 2024 ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಮಾಜಿ ಸಂಸದ ಡಿ.ಕೆ.ಸುರೇಶ್, ಸಂಘಟನಾತ್ಮಕವಾಗಿ ಗಟ್ಟಿಯಾಗುವತ್ತಾ ಹೆಜ್ಜೆ ಇಡುತ್ತಿದ್ದಾರಾ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ಇದಕ್ಕೆ ಪುಷ್ಟೀಕರಣ ನೀಡುವಂತೆ ನಿನ್ನೆ ಬೆಳಗಾವಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣ್‌ದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಡಿ.ಕೆ.ಸುರೇಶ್ ಭೇಟಿಯಾಗಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದ್ದು, ಸಚಿವ ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಎಂ.ಬಿ.ಪಾಟೀಲ್ ರಾಜ್ಯಾಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟಿರುವ ಸಂದರ್ಭದಲ್ಲಿ, ಡಿ.ಕೆ. ಸುರೇಶ್ ಬೆಳಗಾವಿಯ ಅಖಾಡಕ್ಕೆ ಎಂಟ್ರಿ ಕೊಟ್ಟಿರುವುದು ಕುತೂಹಲ ಕೆರಳಿಸಿದೆ.
ಇತ್ತ ಸಂಘಟನಾತ್ಮಕವಾಗಿ ನಾನು ತೊಡಗಿಸಿಕೊಳ್ಳುತ್ತೇನೆ. ಅಣ್ಣನ ಜವಾಬ್ದಾರಿ ನನಗೆ ನೀಡಿ. ನಾನು ಮುಂದೆ ಪಕ್ಷವನ್ನು ಬಲವರ್ಧನೆ ಮಾಡುತ್ತಾ, ಹೈಕಮಾಂಡ್ ನಾಯಕರು ಮತ್ತು ಅಣ್ಣನ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇನೆ ಎಂದು ಡಿ.ಕೆ.ಸುರೇಶ್ ಪ್ರಸ್ತಾಪ ಮಾಡಿದ್ದಾರಾ? ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿದೆ.
ಈಗ ರಾಜ್ಯದಲ್ಲಿ ಕಾಂಗ್ರೆಸ್ ಅಧ್ಯಕ್ಷರ ಅವಧಿ ಮುಕ್ತಾಯವಾಗಿದ್ದು, ನೂತನ ಅಧ್ಯಕ್ಷರ ನೇಮಕಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ರೇಸ್‌ಗೆ ಡಿ.ಕೆ. ಸುರೇಶ್ ಕೂಡ ಬರುತ್ತಾರಾ? ಕಾದು ನೋಡಬೇಕಿದೆ.