ಬೆಂಗಳೂರು: ಕನ್ನಡ ನುಡಿಯ ತಂಪು, ಗಂಧದ ಗುಡಿಯ ಕಂಪನ್ನು ದುಬೈ ನಲ್ಲಿ ಮೆರೆಸುವುದಕ್ಕಾಗಿ ಕನ್ನಡದ ತಂಡ overseas entertainment, G KD investments LLC ಅವರ ಸಹಕಾರದೊಂದಿಗೆ “ಅಂತಾರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ – 2025” ಪ್ರದಾನ ಸಮಾರಂಭ ಫೆ. 16ರಂದು ನಡೆಯಲಿದೆ.
ಈ ಕಾರ್ಯಕ್ರಮ ದುಬೈನಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಹಿತಿ ನೀಡಿದರು. ಕನ್ನಡದ ಹೆಮ್ಮೆಯ ಸಾಧಕರ ಸಾಧನೆ ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಉದ್ಧೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದುಬೈನಲ್ಲಿನ ಕನ್ನಡಿಗರನ್ನೆಲ್ಲ ಒಟ್ಟುಗೂಡಿಸಿ, ಒಂದು ಕಡೆ ಸೇರಿಸಿ ಕನ್ನಡ ಸಂಸ್ಕೃತಿಯ ಸೆಲೆಯನ್ನು ಕನ್ನಡ ಚಂದನವನದ ಕಲೆಯನ್ನು ಸಂಭ್ರಮಿಸುವ ಉದ್ದೇಶವೂ ಹೌದು ಎಂದಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಚಿವ ಶಿವರಾಜ್ ತಂಗಡಗಿ, ಮಾಜಿ ಸಂಸದ ಡಿ.ಕೆ. ಸುರೇಶ್, ಸಂಸದ ಯದುವೀರ್ ಕೃಷ್ಣರಾಜ ಒಡೆಯರ್, ಅಶ್ವಿನಿ ಪುನೀತ್ ರಾಜಕುಮಾರ್, ಆರತಿ ಕೃಷ್ಣ ಹಾಗೂ ಕೆಪಿ ಶ್ರೀಕಾಂತ್ ಆಗಮಿಸಲಿದ್ದಾರೆ.
ಅನುಶ್ರೀ ಹಾಗೂ ಕನ್ನಡದ ಹೆಸರಾಂತ ನಾಯಕ ವಿಜಯ್ ರಾಘವೇಂದ್ರ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಚಿತ್ರರಂಗ, ಕ್ರೀಡೆ, ಸಾಹಿತ್ಯ, ಪತ್ರಿಕೋದ್ಯಮ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು. ಈ ಬಾರಿ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನಟಿ ತಾರಾ ಅನುರಾಧ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜಕ ಪೀಟರ್ ಮಾತನಾಡಿ, ನಮಗೆ ಮಾರ್ಗದರ್ಶಿಗಳಾಗಿ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿದ್ದಾರೆ. ಸುಚೇಂದ್ರ ಪ್ರಸಾದ್ ಇದ್ದಾರೆ ಎಂದಿರು. ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಮತ್ತು ತಂಡದವರಿಂದ ಕನ್ನಡದ ಸುಪ್ರಸಿದ್ಧ ಹಾಡುಗಳ ಸಂಗೀತ ರಸಸಂಜೆ ನಡೆಯಲಿದೆ ಎಂದರು. ನಟಿ ತಾರಾ ಅನುರಾಧ, ನಟ ಸುಚೇಂದ್ರ ಪ್ರಸಾದ್, ನಟ ವಿಜಯ ರಾಘವೇಂದ್ರ ಸೇರಿದಂತೆ ಹಲವರು ಇದ್ದರು.