ದೆಹಲಿ : ಕರ್ನಾಟಕ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲೇ ಬೆಂಗಳೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿ ಗುರುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದ ಅವರು, ಫೆಬ್ರವರಿ13 ಹಾಗೂ 14ರಂದು ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಜೆ. ಟಾಟಾ ಸಭಾಂಗಣದಲ್ಲಿ ಎರಡು ದಿನಗಳ ಸಮ್ಮೇಳನ ನಡೆಯಲಿದ್ದು, ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಭಾರತದಲ್ಲಿ 6,628 ಅಣೆಕಟ್ಟುಗಳಿದ್ದು, ಕರ್ನಾಟಕ 231 ಅಣೆಕಟ್ಟುಗಳನ್ನು ಹೊಂದಿದೆ. ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಒಂದೂವರೆ ವರ್ಷಗಳ ಹಿಂದೆ ಜೈಪುರದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿತ್ತು. ಜಲಶಕ್ತಿ ಸಚಿವಾಲಯ ಸಹಯೋಗದಲ್ಲಿ ಕರ್ನಾಟಕ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಇದಕ್ಕೆ ಕೇಂದ್ರ ಜಲಶಕ್ತಿ ಆಯೋಗವು ಅನೇಕ ಸಲಹೆ ಮಾರ್ಗದರ್ಶನ ನೀಡಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.
ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ 46 ಸಂಶೋಧನಾ ವರದಿಗಳನ್ನು ಮಂಡಿಸಲು ಈ ಸಮ್ಮೇಳನದಲ್ಲಿ ನಾವು ಅನುಮತಿ ನೀಡಿದ್ದೇವೆ. ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ ಭೂಷಣ್ ಚೌಧರಿ, ರಾಜ್ಯ ಸಚಿವ ಬೋಸರಾಜು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 10 ದೇಶಗಳ 25 ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ 400ಕ್ಕೂ ಹೆಚ್ಚು ಜನ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತಾಂತ್ರಿಕ ವಿಚಾರ ಸಂಕಿರಣ, ವಸ್ತುಪ್ರದರ್ಶನ ನಡೆಯಲಿವೆ. ಕರ್ನಾಟಕದ ಹಿತಾಸಕ್ತಿ ಕಾಪಾಡಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದೇವೆ. ಅಣೆಕಟ್ಟುಗಳು ನೀರಾವರಿ, ಇಂಧನ ಉತ್ಪಾದನೆ, ಪ್ರವಾಹ ನಿಯಂತ್ರಣ, ನೀರು ಸರಬರಾಜು ಹಾಗೂ ಮಣ್ಣಿನ ಸಂರಕ್ಷಣೆಯ ಆಧಾರವಾಗಿವೆ. ಸುದೀರ್ಘ ಕಾಲದ ಯೋಜನೆ ಗಮನದಲ್ಲಿಟ್ಟುಕೊಂಡು ಈ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರದ DHFWS ಸಂಸ್ಥೆಯಲ್ಲಿ 6 ವೈದ್ಯರ ನೇಮಕಾತಿ | ಸಂದರ್ಶನದ ದಿನಾಂಕ ಇಲ್ಲಿದೆ



















