ಬೆಂಗಳೂರು | ರಾಜ್ಯ ಸೇರಿದಂತೆ ದೇಶದಲ್ಲಿ ಕಳೆದ 35 ವರ್ಷಗಳಿಂದಲೂ ಒಳಮೀಸಲಾತಿ ಹೋರಾಟ ನಡೆಯುತ್ತಿತ್ತು. ಇದು ಪರಿಶಿಷ್ಟ ಜಾತಿಗಳ 101 ಜಾತಿಗಳಿಗೂ ಸಾಮಾಜಿಕ ನ್ಯಾಯಾಕ್ಕಾಗಿ ನಡೆಯುತ್ತಿದ್ದ ಹೋರಾಟವಾಗಿತ್ತು. ಈ ಎಲ್ಲದರ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿ ಆದೇಶ ಹೊರಡಿಸಿತು.
ಇದಾದ ಬಳಿಕ ರಾಜ್ಯದಲ್ಲಿ ಒಳಮೀಸಲಾತಿ ಪ್ರಕ್ರಿಯೆಗಾಗಿ ಮತ್ತೆ ಹೋರಾಟಗಳು ಮುನ್ನೆಲೆಗೆ ಬಂದವು. ಈಗ ಅದರ ಫಲವಾಗಿ ರಾಜ್ಯ ಸರ್ಕಾರವು ಆ. 19ರಂದು ಸಚಿವ ಸಂಪುಟ ಸಭೆ ನಡೆಸಿ, ಜಸ್ಟೀಸ್ ನಾಗಮನೋಹನ್ ದಾಸ್ ಏಕಸದಸ್ಯ ಆಯೋಗ ನೀಡಿದ್ದ ವರದಿಯನ್ವಯ, ಕೆಲವು ವಿಷಯ ಒಪ್ಪಿ ತನ್ನ ವಿವೇಚನಯಡಿ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ-ಎ (ಮಾದಿಗ ಸಂಬಂಧಿತ ಜಾತಿಗಳು), ಪ್ರವರ್ಗ-ಬಿ (ಹೊಲೆಯ ಸಂಬಂಧಿತ ಜಾತಿಗಳು) ಹಾಗೂ ಪ್ರವರ್ಗ-ಸಿ (ಸ್ಪೃಶ್ಯ ಜಾತಿಗಳಾದ ಭೋವಿ, ಲಂಬಾಣಿ, ಕೊರಮ, ಕೊರಚ ಹಾಗೂ 49 ಮತ್ತು 10 ಅಲೆಮಾರಿ ಮತ್ತು ಅತಿ ಹಿಂದುಳಿದ ಜಾತಿಗಳು) ಎಂದು ವರ್ಗೀಕರಿಸಿ ʼಪ್ರವರ್ಗ-ಎʼ ಗೆ ಶೇ. 6, ʼಪ್ರವರ್ಗ-ಬಿʼಗೆ ಶೇ.6 ಮತ್ತು ʼಪ್ರವರ್ಗ-ಸಿʼಗೆ ಶೇ.5 ಒಳಮೀಸಲಾತಿ ಜಾರಿ ಮಾಡಿ ಆದೇಶ ಹೊರಡಿಸಿತ್ತು.
ಸರ್ಕಾರದ ಒಳಮೀಸಲಾತಿ ವರ್ಗೀಕರಣವು 49 ಅಲೆಮಾರಿ ಸಮುದಾಯಗಳು ಹಾಗೂ 10 ಅತಿ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿಗಳಲ್ಲಿಯೇ ಬಲಿಷ್ಟರಾದ ಸ್ಪೃಶ್ಯ ಜಾತಿಗಳ ಪ್ರವರ್ಗ-ಸಿ ಗುಂಪಿಗೆ ಸೇರಿಸಿದ ತೀರ್ಮಾನವು ದೊಡ್ಡ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಪರಿಶಿಷ್ಟ ಜಾತಿಗಳ 101 ಜಾತಿಗಳಲ್ಲಿ ಅಸ್ಪೃಶ್ಯ ಸಮುದಾಯವಾಗಿರುವ ಮಾದಿಗ ಮತ್ತು ಹೊಲೆಯ ಸಂಬಂಧಿತ ಜಾತಿಗಳು ಶೈಕ್ಷಣಿಕ ಸೇರಿದಂತೆ ಮೀಸಲಾತಿಯ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಸ್ಪೃಶ್ಯ ಜಾತಿಗಳೊಂದಿಗೆ ಪೈಪೋಟಿ ನಡೆಸಲಾರದೆ ಸೋತಿವೆ ಎನ್ನುವುದನ್ನು ಜಸ್ಟೀಸ್ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗದ ವರದಿಯು ಅಂಕಿ-ಅಂಶ ಸಮೇತವಾಗಿ ತಿಳಿಸಿತ್ತು.
ಈ ಅಂಕಿ-ಅಂಶಗಳಂತೆ ಅಸ್ಪೃಶ್ಯ ಸಮುದಾಯಗಳಾದ ಹೊಲೆಯ ಸಂಬಂಧಿತ ಜಾತಿಗಳು ಹಾಗೂ ಮಾದಿಗ ಸಂಬಂಧಿತ ಜಾತಿಗಳು ಸ್ಪೃಶ್ಯ ಜಾತಿಗಳ ಎದುರು ಪೈಪೋಟಿ ನಡೆಸಿ ಮೀಸಲಾತಿಯನ್ನು ಪಡೆಯಲು ವಿಫಲವಾಗಿರುವುದು ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅಲೆಮಾರಿ ಸಮುದಾಯಗಳು ಸ್ಪೃಶ್ಯ ಜಾತಿಗಳ ಜೊತೆ ಹೇಗೆ ಪೈಪೋಟಿ ಮಾಡಬೇಕು ಎಂದು ಈಗ ಹೋರಾಟಗಾರರು ಪ್ರಶ್ನಿಸುತ್ತಿದ್ದಾರೆ. ಸರ್ಕಾರದ ಈ ತೀರ್ಮಾನವನ್ನು ಪ್ರಶ್ನಿಸಿ ಅಲೆಮಾರಿ ಸಮುದಾಯಗಳು ರಾಜ್ಯ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿವೆ. ವಾದ ಆಲಿಸಿದ ಕೋರ್ಟ್, ನೇಮಕಾತಿಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ. ಈ ಹೋರಾಟ ರಾಜಕೀಯ ಜಟಾಪಟಿಗೂ ಕಾರಣವಾಗಿದ್ದು, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.
ಇದನ್ನೂ ಓದಿ : ರಾಯಚೂರಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಇಸ್ಪೀಟ್ ದಂಧೆ.. ವಿಡಿಯೋ ವೈರಲ್



















