ಬೆಂಗಳೂರು : ಒಳ ಮೀಸಲಾತಿ ಕುರಿತು ನಾಗಮೋಹನ್ ದಾಸ್ ವರದಿ ಜಾರಿಗೆ ಸಂಬಂಧಿಸಿದಂತೆ ದಲಿತ ಬಲಗೈ ಹಾಗೂ ಎಡಗೈ ಸಮುದಾಯದ ಸಚಿವರ ನಡುವೆಯೇ ವೈಮನಸ್ಸು ಮೂಡಿದೆ.
ನಾಗಮೋಹನ್ ದಾಸ್ ಅವರಿದ್ದ ಏಕಸದಸ್ಯ ಆಯೋಗ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದ್ದ ವರದಿಯನ್ನು ಪರಿಷ್ಕರಿಸುವಂತೆ ದಲಿತ ಬಲಗೈ ಸಚಿವರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಗೃಹಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವರದಿ ಬಗ್ಗೆ ಒಮ್ಮತ ಮೂಡದೇ ಇರುವುದರಿಂದ ಸಿಎಂ ಸಿದ್ದರಾಮಯ್ಯ ಅವರಲ್ಲಿ ವರದಿ ಪರಿಷ್ಕರಿಸುವುದಕ್ಕೆ ಪರಮೇಶ್ವರ್ ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಒಂದೆಡೆ ವರದಿ ಜಾರಿಯಾಗುವುದು ಸದ್ಯಕ್ಕೆ ಬೇಡ, ವರದಿಯನ್ನು ಪರಿಷ್ಕರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಮನವಿ ಮಾಡಿಕೊಂಡಿದ್ದರೆ, ಇನ್ನೊಂದೆಡೆ ಕೆ. ಎಚ್ ಮುನಿಯಪ್ಪ ವರದಿ ಜಾರಿಗೆ ಒತ್ತಾಯಿಸುತ್ತಿದ್ದಾರೆ. ಈ ದ್ವಂದ್ವ ಅಭಿಪ್ರಾಯವನ್ನು ಹೇಗೆ ಪರಿಗಣಿಸಬೇಕೆಂಬುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ನಡುವೆ ನಾಳೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಒಳ ಮೀಸಲಾತಿ ಬಗ್ಗೆ ನಾಗಮೋಹನ್ ದಾಸ್ ವರದಿಯ ಬಗ್ಗೆ ಮಹತ್ವದ ಚರ್ಚೆಯಾಗುವ ಸಾಧ್ಯತೆ ಇದೆ.
ಇನ್ನು, ಇಂದು(ಸೋಮವಾರ) ದಲಿತ ಬಲಗೈ ಸಮುದಾಯದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ವರದಿ ಪರಿಷ್ಕರಿಸಿ, ಇಲ್ಲವೆಂದರೇ ತಿರಸ್ಕಾರ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯ ತರಲಿದೆ ಎನ್ನಲಾಗಿದೆ.



















