ಬೆಂಗಳೂರು : ರಾಜ್ಯದಲ್ಲಿ ಭಾರೀ ಹೋರಾಟಕ್ಕೆ ಕಾರಣವಾಗಿದ್ದ ಒಳಮೀಸಲಾತಿ ವರದಿ ಕೊನೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ದಲಿತ ಸಮುದಾಯದ ಒಳ ಪಂಗಡಗಳಿಗೆ ಮೀಸಲಾತಿ ನೀಡುವ ನಿಟ್ಟಿನಲ್ಲಿ ಈ ವರದಿ ಮಹತ್ವ ಪಡೆದುಕೊಂಡಿದೆ.
ಇಂದು(ಸೋಮವಾರ) ವಿಧಾನಸೌಧದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್ ದಾಸ್ 1766 ಪುಟಗಳ ವರದಿಯನ್ನು ನೀಡಿದ್ದಾರೆ. ಇದರಲ್ಲಿ ಆರು ಶಿಫಾರಸ್ಸುಗಳು ಒಳಗೊಂಡಿವೆ.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ,”ನ್ಯಾ. ನಾಗಮೋಹನ್ ದಾಸ್ ಆಯೋಗ ಒಳಮೀಸಲಾತಿ ವರದಿ ಕೊಟ್ಟಿದೆ. ಆಯೋಗ ಸುದೀರ್ಘವಾಗಿ ಸಮೀಕ್ಷೆ ನಡೆಸಿತ್ತು. 27 ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಿತ್ತು. 1ಕೋಟಿ 7 ಲಕ್ಷ ಜನರ ಸಮೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಏನಿದೆ ನೋಡಬೇಕಾಗಿದೆ” ಎಂದರು.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಆರೋಪ ಮಾಡುತ್ತಾರೆ. ಅವರು ಏನು ಮಾಡಿದ್ದರು ಗೊತ್ತಿದೆಯಲ್ಲ. ಮಾಧುಸ್ವಾಮಿ ಮೂಲಕ ಏನು ಮಾಡಿಸಿದ್ದರು. ರಾಮನಿಗೊಂದು ಲೆಕ್ಕ ಕೃಷ್ಣನಿಗೊಂದು ಲೆಕ್ಕ ಮಾಡಿದ್ದರು. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದರು. ಆದರೆ ನಾವು ಆ ರೀತಿ ಮಾಡಲ್ಲ. ಎಲ್ಲವನ್ನು ಕಾನೂನು ಬದ್ಧವಾಗಿಯೇ ಮಾಡುತ್ತೇವೆ. ವರದಿಯಲ್ಲಿ ಏನಿದೆ ಎಂಬುದನ್ನು ನೋಡಿ ಜಾರಿಗೆ ತರುತ್ತೇವೆ” ಎಂದಿದ್ದಾರೆ.


















