ಬೆಂಗಳೂರು : ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯ ಬಗ್ಗೆ ಇಂದು(ಗುರುವಾರ) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ವರದಿ ಸ್ವೀಕರಿಸಿದ ದಿನದಂದು ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದ್ದರು.
ನಾಗಮೋಹನದಾಸ್ ಆರು ಶಿಫಾರಸ್ಸುಗಳನ್ನು ಒಳಗೊಂಡ ಸುಮಾರು 1765 ಪುಟಗಳ ವರದಿಯನ್ನು ಸೋಮವಾರ ಸರ್ಕಾರಕ್ಕೆ ಸಲ್ಲಿಸಿದ್ದರು.
ಒಳ ಮೀಸಲಾತಿಗೆ ಆಗ್ರಹಿಸಿ ಮಾದಿಗ ದಂಡೋರ ಒಳಗೊಂಡಂತೆ ವಿವಿಧ ದಲಿತ ಸಂಘಟನೆಗಳು ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ 30 ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿವೆ. ಒಳ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ 2009ರಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿದ್ದ ವರದಿಯನ್ನು ಬದಿಗಿಟ್ಟ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹೊಸತಾಗಿ ಒಳ ಮೀಸಲಾತಿ ಹಂಚಿಕೆ ಮಾಡಿದ್ದರೂ ಜಾರಿಗೆ ಬಂದಿಲ್ಲ.
ನಾಗಮೋಹನ್ ದಾಸ್ ಆಯೋಗ ಹೊಸತಾಗಿ ಸಮೀಕ್ಷೆ ನಡೆಸಿ ಲಭ್ಯವಿರುವ ಶೇ.17ರಷ್ಟು ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಸಾಮಾಜಿಕ ನ್ಯಾಯದ ಬೇಡಿಕೆಗೆ ನಿರ್ಣಾಯಕ ತಿರುವು ನೀಡಲಿರುವ ಈ ವರದಿಯ ಜಾರಿಗೆ ಸಚಿವ ಸಂಪುಟ ಸಭೆ ನಿರ್ಣಯ ತೆಗೆದುಕೊಳ್ಳಲಿದೆಯೇ, ವರದಿಯ ಪರಿಶೀಲನೆಗೆ ಸಚಿವರ ಸಮಿತಿ ರಚಿಸಲಿದೆಯೇ ಅಥವಾ ಅಧ್ಯಯನ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಿದೆಯೇ ಎಂಬ ಕುತೂಹಲ ಸೃಷ್ಟಿಯಾಗಿದೆ.
ಇನ್ನು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರೋಹಿತ್ ವೇಮುಲ ಹಾಗೂ ದೇವದಾಸಿ ಪದ್ಧತಿ ವಿಧೇಯಕಗಳನ್ನು(ಪಿತೃತ್ವ ಹಕ್ಕು) ಅಂಗೀಕರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರೋಹಿತ್ ವೇಮುಲ ವಿಧೇಯಕ ಜಾರಿಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯಗೆ ಖುದ್ದು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಬಲ್ಲ ಮೂಲಗಳು ತಿಳಿಸಿವೆ.
ಸಾಮಾಜಿಕ, ಶೈಕ್ಷಣಿಕ ಮರುಸಮೀಕ್ಷೆ ಬಗ್ಗೆಯೂ ಇಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಸಾಧ್ಯತೆಯಿದ್ದು, ಈಗಾಗಲೇ ಸೆ.22ರಿಂದ ಅ.7ರವರೆಗೆ ಹದಿನೈದು ದಿನಗಳ ಕಾಲ ಮರುಸಮೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಹಿಂದುಳಿದ ವರ್ಗಗಳ ಆಯೋಗ 624 ಕೋಟಿ ರೂ. ಅನ್ನು ಸಮೀಕ್ಷೆಗಾಗಿ ಪ್ರಸ್ತಾವನೆ ಸಲ್ಲಿಕೆ ಮಾಡಿರುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ ಎನ್ನಲಾಗಿದೆ.



















