ಬೆಂಗಳೂರು : ಒಳ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಸಮುದಾಯಗಳಿಂದ ಅಭಿಪ್ರಾಯ ಬಂದಿದೆ, ಎಲ್ಲವನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಚರ್ಚೆ ಮಾಡುತ್ತೇವೆ. ವರದಿಯನ್ನು ಸಂಪುಟ ಸಭೆಯಲ್ಲಿ ಚರ್ಚೆಗೆ ತರುವ ಮೊದಲೇ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ. ಬಳಿಕ ಸಂಪುಟ ಸಭೆಯಲ್ಲಿ ಏನು ತೀರ್ಮಾನ ಆಗುತ್ತದೆ ಅದನ್ನು ಒಪ್ಪಿಕೊಳ್ಳಲೇಬೇಕು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅನುಷ್ಠಾನ ಮಾಡುವುದಕ್ಕೆ ನಾವು ಅಡ್ಡಿ ಮಾಡುತ್ತಿಲ್ಲ. ವರದಿ ಮೇಲೆ ಕೆಲವು ಸಮುದಾಯಕ್ಕೆ ಅಸಮಾಧಾನವಿದೆ. ವರದಿಯನ್ನು ಖಂಡಿತ ಅನುಷ್ಠಾನ ಮಾಡುತ್ತೇವೆ. ಸಣ್ಣಪುಟ್ಟ ಭಿನ್ನ ಅಭಿಪ್ರಾಯಗಳು ಇರುವುದು ಸಹಜ. ಎಲ್ಲಾ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳ ಮುಂದೆ ಇಡುತ್ತೇವೆ. ಶೀಘ್ರದಲ್ಲೇ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ಸಿಎಂ ಸಿದ್ದರಾಮಯ್ಯ ವಿರುದ್ಧ ಕೆಲವರು ಅವಾಚ್ಯ ಶಬ್ದ ಬಳಕೆ ಮಾಡಿ ನಿಂದಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಂತವರ ಬಂಧನಕ್ಕೆ ಸೂಚನೆ ನೀಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪರಂ, ನಾವು ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೇವೆ. ಏನೋ ಹೇಳಿದ್ದಾರೆ ಎಂಬ ಕಾರಣಕ್ಕೆ ಆವರನ್ನು ಬಂಧಿಸುವುದಕ್ಕೆ ಸಾಧ್ಯವಾಗಲ್ಲ. ಅದರ ತೀವ್ರತೆಯನ್ನು ಯೋಚನೆ ಮಾಡಬೇಕಾಗುತ್ತದೆ. ಸದ್ಯಕ್ಕೆ ನಾವೇನೂ ನಿರ್ದೇಶಿಸಿಲ್ಲ. ದ್ವೇಷ ಭಾಷಣ ಮಸೂದೆಯನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ. ಅದರಲ್ಲಿ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತೇವೆ. ಸುಳ್ಳುಸುದ್ದಿ ವಿಚಾರದಲ್ಲೂ ಅನೇಕ ವಿಚಾರಗಳನ್ನು ಪ್ರಸ್ತಾಪಿಸುತ್ತೇವೆ ಎಂದಿದ್ದಾರೆ.


















