ಬೆಂಗಳೂರು: ಕೇಂದ್ರ ಸರ್ಕಾರದ ಹುದ್ದೆಯನ್ನು ಹಿಡಿಯಬೇಕು, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಯಸುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ಗುಪ್ತಚರ ಬ್ಯೂರೋದಲ್ಲಿ (Intelligence Bureau Recruitment 2025) ಖಾಲಿ ಇರುವ 394 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-II (ಟೆಕ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಆಸಕ್ತರು ಅರ್ಜಿಗಳನ್ನು ಸಲ್ಲಿಸುವ ಮೂಲಕ ಹುದ್ದೆಗಳನ್ನು ಪಡೆಯಬಹುದು.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಗುಪ್ತಚರ ಬ್ಯೂರೋ
ಒಟ್ಟು ಹುದ್ದೆಗಳು: 394
ಹುದ್ದೆಗಳ ಹೆಸರು: ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-II (ಟೆಕ್)
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 14
ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಡಿಪ್ಲೋಮಾ, ಪದವಿ, ಬಿಎಸ್ಸಿ, ಬಿಸಿಎ ಕೋರ್ಸ್ ಗಳನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕನಿಷ್ಠ 18ರಿಂದ 27 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ನೇಮಕಾತಿ ಹೊಂದಿದವರಿಗೆ ಮಾಸಿಕ 25,500-81,100 ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ, ಎಸ್ಟಿಯವರಿಗೆ ಐದು ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಎಲ್ಲ ಸಮುದಾಯಗಳ ಅಭ್ಯರ್ಥಿಗಳಿಗೂ 550 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಕೌಶಲ ಪರೀಕ್ಷೆ, ಸಂದರ್ಶನ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ತಪಾಸಣೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು https://www.ncs.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
 
                                 
			 
			
 
                                 
                                


















