ನವದೆಹಲಿ : ತಂತ್ರಜ್ಞಾನ ಕಂಪನಿಯಾದ ಜಿಯೋ ಪ್ಲಾಟ್‌ಫಾರಂ ಲಿಮಿಟೆಡ್ (ಜೆಪಿಎಲ್) ಎರಡು ಮಹತ್ವದ ಬೌದ್ಧಿಕ ಆಸ್ತಿ ಪ್ರಶಸ್ತಿಗಳನ್ನು ಗೆದ್ದು ಬೀಗಿದೆ. ಇದೇ ವೇಳೆ, ಭಾರತದ ತಾಂತ್ರಿಕ ಸಾರ್ವಭೌಮತ್ವ ಮತ್ತು ಡಿಜಿಟಲ್ ಸ್ವಾತಂತ್ರ್ಯವನ್ನು ಮುನ್ನಡೆಸುವಲ್ಲಿ ತನ್ನ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಜಿಯೋ ಪ್ಲಾಟ್‌ಫಾರಂ ಕಂಪನಿಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಬೌದ್ಧಿಕ ಆಸ್ತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು ಮತ್ತು ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಕಂಪನಿಯ ಅಸಾಧಾರಣ ಶ್ರೇಷ್ಠತೆಯನ್ನು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯು (ಡಬ್ಲ್ಯುಐಪಿಒ) ಗುರುತಿಸಿತು.
ಈ ಪ್ರತಿಷ್ಠಿತ ಪ್ರಶಸ್ತಿಗಳು ಜೆಪಿಎಲ್‌ನ ಬೌದ್ಧಿಕ ಆಸ್ತಿ ಸಾಧನೆಗಳನ್ನು ತಿಳಿಸುವುದಲ್ಲದೆ, ದೂರಸಂಪರ್ಕ ಕ್ಷೇತ್ರದಲ್ಲಿ ಭಾರತದ ಆತ್ಮನಿರ್ಭರ (ಸ್ವಾವಲಂಬಿ) ದೃಷ್ಟಿಕೋನಕ್ಕೆ ಅದರ ಪ್ರಮುಖ ಕೊಡುಗೆಯನ್ನು ಒತ್ತಿಹೇಳುತ್ತವೆ.
ಜೆಪಿಎಲ್‌ನ ಬೌದ್ಧಿಕ ಆಸ್ತಿ ಕಾರ್ಯತಂತ್ರವು ಭಾರತ ಸರ್ಕಾರದ ‘ವಿಕಾಸ್ ಭಾರತ್ 2047’ ಉದ್ದೇಶದೊಂದಿಗೆ ಸಂಕೀರ್ಣವಾಗಿ ಹೊಂದಿಕೆಯಾಗಿದೆ. ಇದು ತಾಂತ್ರಿಕ ನಾವೀನ್ಯತೆ, ಡಿಜಿಟಲ್ ರೂಪಾಂತರ ಮತ್ತು ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳ ಅಭಿವೃದ್ಧಿಯ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗಿ ಕೊಂಡೊಯ್ಯುವ ಗುರಿಯನ್ನು ಹೊಂದಿದೆ.
ಭಾರತ ಸರ್ಕಾರವು ‘ಭಾರತ್ 6ಜಿ’ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ಗಮನ ಹರಿಸುತ್ತಿದ್ದಂತೆ, ಜೆಪಿಎಲ್ ಈ ತಾಂತ್ರಿಕ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿ ನಿಂತಿದೆ.
ಕಂಪನಿಯ ದೃಢವಾದ ಸಂಶೋಧನೆ ಮತ್ತು ಅಭಿವೃದ್ಧಿ, 5ಜಿ ಮತ್ತು ಎಐನಲ್ಲಿ ಸ್ಥಳೀಯ ತಂತ್ರಜ್ಞಾನ ನಿಯೋಜನೆಯ ಸಾಬೀತಾದ ದಾಖಲೆಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದು ಭಾರತದ ಮುಂದಿನ ಪೀಳಿಗೆಯ ದೂರಸಂಪರ್ಕ ಕ್ಷೇತ್ರವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜೆಪಿಎಲ್‌ಗಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವಾಗ ಜಿಯೋ ಪ್ಲಾಟ್‌ಫಾರಂ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ಆಯುಷ್ ಭಟ್ನಾಗರ್, ‘ಈ ಪ್ರಶಸ್ತಿಗಳು ನೈಜ-ಪ್ರಪಂಚದ ಸವಾಲುಗಳನ್ನು ಪರಿಹರಿಸುವ ಆಳವಾದ ಬದ್ಧತೆಯೊಂದಿಗೆ ನಾವೀನ್ಯತೆಯನ್ನು ಸಂಯೋಜಿಸುವ ನಮ್ಮ ವಿಧಾನವನ್ನು ದೃಢೀಕರಿಸುತ್ತವೆ. ನಾವು ಕೇವಲ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿಲ್ಲ; ನಾವು 5ಜಿ, 6ಜಿ ಮತ್ತು ಕೃತಕ ಬುದ್ಧಿಮತ್ತೆಯ ಮೂಲಕ ಡಿಜಿಟಲ್ ಯುಗದಲ್ಲಿ ರಾಷ್ಟ್ರೀಯ ಬೆಳವಣಿಗೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸಾಮರ್ಥ್ಯಗಳನ್ನು ನಿರ್ಮಿಸುತ್ತಿದ್ದೇವೆ’ ಎಂದರು.