ರಾಮನಗರ: ರಾಜ್ಯ ಸರ್ಕಾರವು ಬಿಡದಿ ಬಳಿ ಸುಮಾರು 20 ಸಾವಿರ ಕೋಟಿ ರೂ ವೆಚ್ಚದಲ್ಲಿ 9 ಸಾವಿರ ಎಕರೆ ಪ್ರದೇಶದಲ್ಲಿ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆ ಮಾಡಲು ಮುಂದಾಗಿದೆ. ಆದರೆ ಈ ಯೋಜನೆಗೆ ಬಿಡದಿ ಭಾಗದ ಕೆಲ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಹೊಸೂರು ಗ್ರಾಮದ ಬಳಿ ಇರುವ ಮದ್ದೂರುಮ್ಮ ದೇವಸ್ಥಾನದ ಬಳಿ ಈ ಯೋಜನೆಯನ್ನು ವಿರೋಧಿಸಿ ನೂರಾರು ರೈತರು ಸೇರಿದ್ದರು, ಯೋಜನೆಗೆ ವಯೋವೃದ್ದೆಯಿಂದಲೂ ವಿರೋಧ ವ್ಯಕ್ತವಾಗಿದೆ.
ಈ ವೇಳೆ ಮದ್ದೂರುಮ್ಮ ದೇವರ ಮೇಲೆ ಪ್ರಮಾಣ ಮಾಡಿ ಸಂಕಲ್ಪ ಮಾಡಲಾಯಿತು. ಯಾವುದೇ ಕಾರಣಕ್ಕೂ ಭೂಮಿ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿ, ತೆಂಗಿನಮರಕ್ಕೆ ಹಾಲುತುಪ್ಪು ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಜಮೀನಿನಲ್ಲಿರುವ ಲಕ್ಷಾಂತರ ತೆಂಗಿನಮರಗಳನ್ನು ಕಡಿಯಲು ಮುಂದಾಗಿದ್ದಾರೆ, ಅಂತವರು ಹಾಳಾಗಲಿ, ನಮಗೆ ವಿಷ ಕೊಡಲಿ ನಾವು ನೋಡೋಣ, ನಮ್ಮ ಭೂಮಿಯನ್ನು ಬಿಡುವುದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ತಮ್ಮಾಸಮಧಾನ ಹೊರ ಹಾಕಿದ್ದಾರೆ.