ಬೆಂಗಳೂರು: ಕೇಂದ್ರ ಸರ್ಕಾರವು ಜಿಎಸ್ ಟಿಗೆ ಮಹತ್ವದ ಸುಧಾರಣೆ ತಂದಿದೆ. ನಾಲ್ಕು ಸ್ಲ್ಯಾಬ್ ಗಳ ಬದಲಾಗಿ ಕೇವಲ ಎರಡು ಸ್ಲ್ಯಾಬ್ ಗಳ ಜಿಎಸ್ ಟಿ ಉಳಿಸಿಕೊಂಡಿರುವ ಕಾರಣ ಜನರಿಗೆ ಭಾರಿ ಉಳಿತಾಯವಾಗಲಿದೆ. ಅದರಲ್ಲೂ, ಹೆಲ್ತ್ ಇನ್ಶೂರೆನ್ಸ್ ಸೇರಿ ಹಲವು ವಿಮೆಗಳ ಪ್ರೀಮಿಯಂ ಮೇಲಿನ ಶೇ.18ರಷ್ಟು ತೆರಿಗೆ ರದ್ದುಗೊಳಿಸಿದ ಕಾರಣ ಜನರಿಗೆ ಖುಷಿಯಾಗಿತ್ತು. ಆದರೆ, ಜಿಎಸ್ ಟಿ ಕಡಿತವಾದರೂ ಪ್ರೀಮಿಯಂ ಬೆಲೆಯಲ್ಲಿ ಶೇ.1ರಿಂದ ಶೇ.4ರಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, ಜಿಎಸ್ ಟಿ ಕಡಿತದ ಲಾಭವು ಗ್ರಾಹಕರಿಗೆ ಸಿಗಬೇಕಿದ್ದರೂ, ವಿಮಾದಾರರು ಇನ್ ಪುಟ್ ತೆರಿಗೆ ವಿನಾಯಿತಿ (ಐಟಿಸಿ) ನಷ್ಟವನ್ನು ಸರಿದೂಗಿಸಲು ವಿಮೆ ಬೆಲೆಗಳನ್ನು ಹೆಚ್ಚಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಏಕೆಂದರೆ, ಈಗ ವಿಮಾ ಕಂಪನಿಗಳು ತಮ್ಮ ವೆಚ್ಚಗಳ ಮೇಲೆ ಜಿಎಸ್ ಟಿ ಪಾವತಿಸುತ್ತವೆಯಾದರೂ, ಅದಕ್ಕೆ ಇನ್ ಪುಟ್ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ. ಹಾಗಾಗಿ, ಪ್ರೀಮಿಯಂ ಬೆಲೆ ಹೆಚ್ಚಿಸಲಿವೆ ಎಂದು ಹೇಳಲಾಗುತ್ತಿದೆ.
ಉದಾಹರಣೆಗೆ, ಮೊದಲು ಪ್ರೀಮಿಯಂ 1 ಸಾವಿರ ರೂ. ಆಗಿದ್ದಾಗ, 18% ಜಿಎಸ್ಟಿ ಸೇರಿ ವಿಮಾ ಕಂಪನಿಗಳು ಗ್ರಾಹಕರಿಂದ 1,180 ರೂ. ಸಂಗ್ರಹಿಸುತ್ತಿದ್ದವು. ಹಾಗೆಯೇ, ಇನ್ ಪುಟ್ ತೆರಿಗೆ ವಿನಾಯಿತಿಯನ್ನೂ ಪಡೆಯುತ್ತಿದ್ದವು.
ಆದರೆ,, ಈಗ ಪ್ರೀಮಿಯಂಗೆ ಜಿಎಸ್ ಟಿಯಿಂದ ವಿನಾಯಿತಿ ಸಿಕ್ಕಿರುವುದರಿಂದ, ಇನ್ ಪುಟ್ ತೆರಿಗೆ ವಿನಾಯಿತಿ ಲಭ್ಯವಿರುವುದಿಲ್ಲ. ಇದರಿಂದ, ತಮ್ಮ ವೆಚ್ಚವನ್ನು ಮರುಪಡೆಯಲು ವಿಮಾದಾರರು ಮೂಲ ಪ್ರೀಮಿಯಂ ಅನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಗ್ರಾಹಕರಿಗೆ ಜಿಎಸ್ ಟಿ ಕಡಿತದ ಲಾಭ ಹೆಚ್ಚು ದೊರೆಯುವುದಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಸೆಪ್ಟೆಂಬರ್ 22ರ ಬಳಿಕವೇ ಇದರ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.