ಬೆಂಗಳೂರು : ರಾಜ್ಯ ರಾಜಧಾನಿಯಲ್ಲೇ ಕನ್ನಡ ವಿರೋಧಿ ನಡೆ ದಿನದಿಂದ ದಿನ ಹೆಚ್ಚಾಗುತ್ತಲೇ ಇದೆ. ಖಾಸಗಿ ಶಾಲೆಗಳ ದರ್ಬಾರು ಹೆಚ್ಚಳವಾಗಿರುವುದರಿಂದ ಈ ಧೋರಣೆ ಶಾಲೆಗಳ ಮೆಟ್ಟಿಲೂ ಏರಿದೆ.
ಹೌದು, ಬೆಂಗಳೂರಿನಲ್ಲಿ ಮತ್ತೊಂದು ಖಾಸಗಿ ಶಾಲೆಯಿಂದ ಕನ್ನಡ ವಿರೋಧಿ ನಡೆಯ ಬಗ್ಗೆ ಈಗ ಗಂಭೀರ ಆರೋಪ ಕೇಳಿ ಬಂದಿದೆ. ಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುತ್ತಿರುವುದು ಮಾತ್ರವಲ್ಲದೇ, ಕೇವಲ ಆಂಗ್ಲ ಭಾಷೆಯಲ್ಲಿ ಮಾತ್ರ ಸಂವಹನ ನಡೆಸುವಂತೆ ವಿಧ್ಯಾರ್ಥಿಗಳ ಮೇಲೆ ತೀವ್ರ ಒತ್ತಡ ಹಾಕುತ್ತಿದೆ ಎಂಬ ದೂರಿದೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸಿಂಧಿ ಪ್ರೌಢ ಶಾಲೆ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.
ಶಾಲೆಗೆ ಭೇಟಿ ನೀಡಿ ನೈಜತೆ ಪರಿಶೀಲಿಸುವಂತೆ ಪುರುಷೋತ್ತಮ ಬಿಳಿಮಲೆ ಪತ್ರದ ಮೂಲಕ ನಿರ್ದೇಶಿಸಿದ್ದಲ್ಲದೇ, ಶಾಲೆ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದ್ದಾರೆ.
ಮಾತ್ರವಲ್ಲದೇ, ಒಂದು ವಾರದೊಳಗೆ ಪ್ರಾಧಿಕಾರಕ್ಕೆ ವರದಿ ನೀಡುವಂತೆಯೂ ಬಿಳಿಮಲೆ ಸೂಚನೆ ನೀಡಿದ್ದಾರೆ.
ಇನ್ನು, ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಂಧಿ ಶಾಲೆ ಆಡಳಿತ ಮಂಡಳಿ ನಿರಾಕರಣೆ ಮಾಡಿದೆ.