ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಧಿವೇಶನದ ಮೊದಲ ದಿನ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರಾಜ್ಯಪಾಲರಿಗೆ ನಿರಂತರವಾಗಿ ಅಪಮಾನ ಮಾಡುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿಯಿಂದ ಮಾ.3 ರಂದು ಪ್ರತಿಭಟಿಸಲಾಗುವುದು. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದು ಲಕ್ಷ ಕೋಟಿ ರೂ. ಸಾಲ ಮಾಡಲಾಗುತ್ತಿದೆ. ಜನರ ಮೇಲೆ ಹೆಚ್ಚು ತೆರಿಗೆ ಹೇರಲಾಗುತ್ತಿದೆ. ಇದನ್ನು ಖಂಡಿಸಿ ಮಾ.7 ರಂದು ಶಾಸಕರ ಭವನದಿಂದ ವಿಧಾನಸೌಧಕ್ಕೆ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ದಲಿತರ ಹಣವನ್ನು ಗ್ಯಾರಂಟಿಗೆ ಬಳಸಿದೆ. ದಲಿತರ ಹಣವನ್ನು ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಮಾತ್ರ ಬಳಸಬೇಕು. ಚುನಾವಣೆ ಸಮಯದಲ್ಲಿ ಎಲ್ಲರಿಗೂ ಫ್ರೀ ಎಂದು ಹೇಳಿ, ಈಗ ದಲಿತರ ಹಣ ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಡಿಕೆಶಿ, ಸಿನಿಮಾ ಕಲಾವಿದರಿಗೆ ನೆಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದಾರೆ. ಮೊದಲು ಸಚಿವ ರಾಜಣ್ಣ ಸೇರಿದಂತೆ ಇವರಿಗೆ ವಿರೋಧ ಮಾಡುತ್ತಿರುವವರಿಗೆ ನೆಟ್ ಬೋಲ್ಟ್ ಸರಿ ಮಾಡಲಿ. ಕಲಾವಿದರಿಗೆ ಧಮ್ಕಿ ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಕಲಾವಿದರು ಕಾಂಗ್ರೆಸ್ ಪಕ್ಷದ ಗುಲಾಮರಲ್ಲ ಎಂದು ಗುಡುಗಿದ್ದಾರೆ.
ಧಮ್ಕಿ ಹಾಕುವುದು, ಗೂಂಡಾಗಿರಿ ಮಾಡುವುದು ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಸಿನಿಮಾ ರಂಗಕ್ಕೆ ಬಿಜೆಪಿ ಸರ್ಕಾರ ಸಾಕಷ್ಟು ನೆರವು ನೀಡಿತ್ತು. ಇಂದು ಅಂಬರೀಶ್ ಅವರು ಇದ್ದಿದ್ದರೆ ಸರಿಯಾಗಿ ಉತ್ತರ ನೀಡುತ್ತಿದ್ದರು ಎಂದು ಕಿಡಿಕಾರಿದ್ದಾರೆ.