ದಾವಣಗೆರೆ: ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವ ಬದಲು ಮೌಲ್ಯಮಾಪಕರಿಗೆ ನೀಡಬೇಕಾಗಿದ್ದ ಉತ್ತರಗಳಿದ್ದ ಪತ್ರಿಕೆಯನ್ನು ವಿತರಿಸಿ ದಾವಣಗೆರೆ ವಿಶ್ವವಿದ್ಯಾಲಯ(Davanagere University) ಯಡವಟ್ಟು ಮಾಡಿದೆ.
ಇಂದು ನಡೆದ ಬಿ.ಕಾಂನ 6ನೇ ಸೆಮಿಸ್ಟರ್ ಇ- ಕಾಮರ್ಸ್ ಪರೀಕ್ಷೆಯಲ್ಲಿ ಈ ಯಡವಟ್ಟು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ಪ್ರಶ್ನೆ ಪತ್ರಿಕೆ ನೀಡುವ ಬದಲು ಉತ್ತರ ಇರುವ ಪೇಪರ್ ಕೊಟ್ಟು ನಿರ್ಲಕ್ಷ್ಯ ಮೆರೆಯಲಾಗಿದೆ.
ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೌಲ್ಯಮಾಪಕರುಗಳಿಗೆ ನೀಡುವ ಉತ್ತರ ಪ್ರತಿ ಇದಾಗಿದ್ದು, ವಿದ್ಯಾರ್ಥಿಗಳಿಗೆ ನೀಡಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ 60 ಕಾಲೇಜುಗಳ ಪೈಕಿ 15 ಕಾಲೇಜುಗಳಿಗೆ ಈ ರೀತಿ ಉತ್ತರ ಪತ್ರಿಕೆ ನೀಡಿ, ಯಡವಟ್ಟು ಮಾಡಲಾಗಿದೆ. ಹೀಗಾಗಿ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ರಮೇಶ್ ಪರೀಕ್ಷೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದಿಂದ ನಡೆಯುತ್ತಿರುವ ಯಡವಟ್ಟು ಇದೇ ಮೊದಲಲ್ಲ. 2017ರಲ್ಲಿ ಕೂಡ ಬಿಎ ಪದವಿಯ ಮೂರನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಅದಲು ಬದಲು ಆಗಿತ್ತು. ಪರೀಕ್ಷಾ ಮೇಲ್ವಿಚಾರಕರ ಎಡವಟ್ಟಿನಿಂದ ಪ್ರಶ್ನೆಪತ್ರಿಕೆ ಅದಲು ಬದಲಾಗಿದ್ದು, ಮೂರು ಗಂಟೆ ವಿದ್ಯಾರ್ಥಿಗಳು ಹಳೆಯ ಪಠ್ಯ ಕ್ರಮದ ಪ್ರಶ್ನೆಪತ್ರಿಕೆಗೆ ಉತ್ತರ ಬರೆದಿದ್ದರು. ಈಗ ಮತ್ತೊಂದು ಯಡವಟ್ಟು ಬೆಳಕಿಗೆ ಬಂದಿದೆ.