ಬೆಂಗಳೂರು : ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿನ G+3 ಹಾಗೂ ಅದಕ್ಕಿಂತ ಹೆಚ್ಚಿನ ಅಂತಸ್ತುಗಳನ್ನು ಹೊಂದಿರುವ ಎಲ್ಲಾ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ನೆಲಮಹಡಿಯಲ್ಲಿ ಕಡ್ಡಾಯವಾಗಿ ತ್ಯಾಜ್ಯ ಸಂಗ್ರಹಣಾ ಬಿನ್ಗಳನ್ನು ಅಳವಡಿಸಬೇಕೆಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಆದೇಶ ಹೊರಡಿಸಿದ್ದಾರೆ.

ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಜಾರಿಗೊಳಿಸಿರುವ ‘ಘನತ್ಯಾಜ್ಯ ನಿರ್ವಹಣಾ ನಿಯಮಗಳು–2016’ರ ಅನ್ವಯ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಪರಿಣಾಮಕಾರಿಯಾಗಿ ನಿರ್ವಹಿಸಬೇಕಾಗಿದೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ ಸುಮಾರು 800ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ಗಳು ಗುರುತಿಸಲ್ಪಟ್ಟಿವೆ. ಪರಿಶೀಲನೆ ವೇಳೆ ಕೆಲವು ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ತ್ಯಾಜ್ಯವನ್ನು ವಿಲೇವಾರಿದಾರರಿಗೆ ಹಸ್ತಾಂತರಿಸದೇ, ಅನಧಿಕೃತವಾಗಿ ರಸ್ತೆ ಬದಿ ಹಾಗೂ ಖಾಲಿ ನಿವೇಶನಗಳಲ್ಲಿ ಎಸೆಯುತ್ತಿರುವುದು ಕಂಡುಬಂದಿದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೆ ಹಾಗೂ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಜಿಬಿಎ ತಿಳಿಸಿದೆ.
ಘನತ್ಯಾಜ್ಯ ನಿರ್ವಹಣಾ ನಿಯಮಗಳು–2016ರ ನಿಯಮ–4ರ ಪ್ರಕಾರ, ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರು ತಮ್ಮ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಗೃಹ ಬಳಕೆಯ ಅಪಾಯಕಾರಿ ತ್ಯಾಜ್ಯವೆಂದು ವಿಂಗಡಿಸಿ, ಪ್ರತ್ಯೇಕ ಬಣ್ಣದ ಬಿನ್ಗಳಲ್ಲಿ ಸಂಗ್ರಹಿಸಿಡುವುದು ಕಡ್ಡಾಯವಾಗಿದೆ.
ಈ ಹಿನ್ನೆಲೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿನ G+3 ಹಾಗೂ ಅದಕ್ಕಿಂತ ಹೆಚ್ಚಿನ ಅಂತಸ್ತುಗಳಿರುವ ಎಲ್ಲಾ ವಸತಿ ಸಮುಚ್ಚಯಗಳು ಮತ್ತು ವಾಣಿಜ್ಯ ಆಸ್ತಿ ಮಾಲೀಕರು, ತಮ್ಮ ಕಟ್ಟಡದ ನೆಲಮಹಡಿಯಲ್ಲಿ ಕನಿಷ್ಠ ಎರಡು ತ್ಯಾಜ್ಯ ಸಂಗ್ರಹಣಾ ಬಿನ್ಗಳನ್ನು ಸ್ಥಾಪಿಸಿ, ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಶೇಖರಿಸಬೇಕು ಎಂದು ಆದೇಶಿಸಲಾಗಿದೆ.
ನೆಲಮಹಡಿಯಲ್ಲಿ ಬಿನ್ಗಳನ್ನು ಅಳವಡಿಸುವುದರಿಂದ ಸ್ವಚ್ಛತಾ ಸಿಬ್ಬಂದಿಗೆ ಮನೆಮನೆ ಕಸ ಸಂಗ್ರಹಣೆ ಸುಗಮವಾಗಲಿದ್ದು, ತ್ಯಾಜ್ಯ ವಿಂಗಡಣೆ ಖಚಿತವಾಗಲಿದೆ. ಇದರಿಂದ ನಗರದಲ್ಲಿನ ಬ್ಲಾಕ್ ಸ್ಪಾಟ್ಗಳನ್ನು ಗಣನೀಯವಾಗಿ ಕಡಿಮೆ ಮಾಡಿ, ದೀರ್ಘಾವಧಿಯಲ್ಲಿ ಸಂಪೂರ್ಣ ನಿರ್ಮೂಲನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಆದೇಶವನ್ನು ಉಲ್ಲಂಘಿಸಿ ತ್ಯಾಜ್ಯ ಬಿನ್ಗಳನ್ನು ನಿರ್ವಹಿಸದ ಕಟ್ಟಡಗಳಿಗೆ ನೋಟೀಸ್ ನೀಡಲಾಗುವುದಲ್ಲದೆ, ದಂಡ ವಿಧಿಸಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ. ಈ ಕ್ರಮದಿಂದ ನಗರ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಮಹತ್ವದ ಸುಧಾರಣೆ ಸಾಧ್ಯವಾಗಲಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನ ಹಲವೆಡೆ ಫೆ. 5-6ಕ್ಕೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ | ನಿಮ್ಮ ಏರಿಯಾ ಇದ್ಯಾ ಚೆಕ್ ಮಾಡಿ



















