ಧಾರವಾಡ : ಮಹಾತಪಸ್ವಿನಿ ಗಣಿನಿ ಆರ್ಯಿಕಾರತ್ನ 105 ಶ್ರೀಜಿನವಾಣಿ ಮಾತಾಜಿ ಅವರ 30ನೆಯ ಚಾತುರ್ಮಾಸದ ಅಂಗವಾಗಿ ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀನೇಮಿನಾಥ ಜಿನಾಲಯದಲ್ಲಿ ಗುರುವಾರ (ಜು.9) ಅಪರಾಹ್ನ 1 ಗಂಟೆಗೆ ಜೈನ್ ಧರ್ಮದ ವಿಶಿಷ್ಟ ಪೂಜಾ ವಿಧಾನಗಳೊಂದಿಗೆ ವಿದ್ಯುಕ್ತವಾಗಿ ‘ಮಂಗಳ ಕಲಶ’ ಸ್ಥಾಪನಾ ಮಹೋತ್ಸವ ನಡೆಯುವುದರೊಂದಿಗೆ ಚಾತುರ್ಮಾಸ ವೃತಾಚರಣೆಯ ಧಾರ್ಮಿಕ ಕೈಂಕರ್ಯಗಳಿಗೆ ಚಾಲನೆ ಲಭಿಸಲಿದೆ.

ಶ್ರೀಜಿನವಾಣಿ ಮಾತಾಜಿ ಅವರ ಪಾವನ ಸಾನ್ನಿಧ್ಯದಲ್ಲಿ ಆರ್ಯಿಕಾ ಶ್ರೀ105 ವಿನಮ್ರಜ್ಯೋತಿ ಮಾತಾಜಿ, ಕ್ಷುಲ್ಲಿಕಾ ಶ್ರೀಅಮೃತಜ್ಯೋತಿ ಮಾತಾಜಿ ಹಾಗೂ ಕ್ಷುಲ್ಲಿಕಾ ಶ್ರೀಅಚಲಜ್ಯೋತಿ ಮಾತಾಜಿ ಪಾಲ್ಗೊಳ್ಳುವರು. ಅಮ್ಮಿನಬಾವಿ ಜೈನ್ ಮಠದ ಶ್ರೀಧರ್ಮಸೇನ ಭಟ್ಟಾರಕ ಸ್ವಾಮೀಜಿ ಅಧ್ಯಕ್ಷತೆವಹಿಸುವರು. ಕರ್ನಾಟಕ ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ತವನಪ್ಪ ಅಷ್ಟಗಿ ಹಾಗೂ ಜೆ.ಎಸ್.ಎಸ್. ಪದವಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.
ಮಾತಾಜಿಯವರ ಆಶೀರ್ವಾದ ಪಡೆಯಲು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸುವ ಜೈನ್ ಸಮಾಜದ ಶ್ರಾವಕ-ಶ್ರಾವಕಿಯರಿಗೆ ಮಧ್ಯಾಹ್ನ ಮತ್ತು ಸಂಜೆ ಭೋಜನದ ವ್ಯವಸ್ಥೆ ಮಾಡಲಾಗಿದೆ. ಅಮ್ಮಿನಬಾವಿ ಗ್ರಾಮವು ಧಾರವಾಡ ನಗರದಿಂದ 11 ಕಿ.ಮೀ. ಹಾಗೂ ಸವದತ್ತಿಯಿಂದ 25 ಕಿ.ಮೀ. ಅಂತರದಲ್ಲಿದ್ದು, ಸಂಚಾರಕ್ಕೆ ಬಸ್ ಸೌಲಭ್ಯವಿದೆ ಎಂದು ಅಮ್ಮಿನಬಾವಿ ಜೈನ್ ಸಮಾಜ ಟ್ರಸ್ಟ್ ಅಧ್ಯಕ್ಷ ಟಿ.ಎಂ. ದೇಸಾಯಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.