ಬೆಂಗಳೂರು : ಅಪರಾಧ ಪ್ರಕರಣವೊಂದರಲ್ಲಿ ಆರೋಪಿಗೆ ಸಹಾಯ ಮಾಡಲು 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಲಂಚ ಪಡೆದ ಆರೋಪದಡಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಗೋವಿಂದರಾಜು ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಗುರುವಾರ ಮೈಸೂರು ರಸ್ತೆಯ ಸಿಎಎಆರ್ ಮೈದಾನ ಬಳಿ ಪೊಲೀಸ್ ಸಮವಸ್ತ್ರದಲ್ಲಿಯೇ ಲಂಚ ಪಡೆಯುತ್ತಿದ್ದಾಗ ಇನ್ಸ್‌ಪೆಕ್ಟರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಟ್ರ್ಯಾಪ್ಗೆ ಒಳಗಾಗುತ್ತಿದ್ದಂತೆ ಗೋವಿಂದರಾಜು ಜೋರಾಗಿ ಚೀರಾಡಿದ್ದರು. ಬಳಿಕ ಸಿನಿಮೀಯ ಶೈಲಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಬಳಿಕ ಲೋಕಾಯುಕ್ತ ದಾಳಿ ವೇಳೆ ಗೋವಿಂದರಾಜು ಚೀರಾಡಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ಲಂಚ ಪಡೆದ ಆರೋಪ ಸಂಬಂಧ ಇನ್ಸ್‌ಪೆಕ್ಟರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೆಲ ದಿನಗಳ ಹಿಂದೆ ವಾರ್ಷಿಕ ಪೊಲೀಸ್ ಸಮ್ಮೇಳನದಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಕೂಡದು ಎಂದು ಎಚ್ಚರಿಸಲಾಗಿತ್ತು. ಪದೇ ಪದೇ ಇಂತಹ ಘಟನೆಯಾದಾಗ ಸರ್ಕಾರಕ್ಕೆ ಹಾಗೂ ವೈಯುಕ್ತಿಕವಾಗಿ ನನಗೂ ಮುಜುಗರವಾಗಲಿದೆ. ಆಗಾಗ ಇಂತಹ ಘಟನೆಗಳು ಯಾಕೆ ನಡೆಯುತ್ತದೆ ಎಂಬುದರ ಬಗ್ಗೆ ಅಧ್ಯಯನ ಮಾಡಬೇಕಿದೆ ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ |
ಅಪರಾಧ ಪ್ರಕರಣಕ್ಕೆ ಸಂಬಂದಿಸಿ ಮಹಮ್ಮದ್ ಅಕ್ಟರ್ ಎಂಬಾತನಿಗೆ ಸಹಾಯ ಮಾಡಲು ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಒಟ್ಟು 5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಮೊದಲ ಹಂತವಾಗಿ 1 ಲಕ್ಷ ರೂಪಾಯಿ ಹಣ ಪಡೆದು, ಬಳಿಕ ಉಳಿದ 4 ಲಕ್ಷ ರೂಪಾಯಿಯನ್ನು ಕೂಡಲೇ ನೀಡಲೇಬೇಕು ಎಂದು ಒತ್ತಡ ಹಾಕಿದ್ದರು. ಈ ಬಗ್ಗೆ ಲೋಕಾಯುಕ್ತರಿಗೆ ಮಹಮ್ಮದ್ ಅಕ್ಟರ್ ಅಧಿಕೃತ ದೂರು ಸಲ್ಲಿಸಿದ್ದರು. ದೂರುದಾರನಿಂದ ಉಳಿದ ಹಣವನ್ನು ಮೈಸೂರು ರಸ್ತೆಯ ಸಿಎಎಆರ್ ಮೈದಾನ ಬಳಿ ಪೊಲೀಸ್ ಸಮವಸ್ತ್ರದಲ್ಲಿಯೇ ಪಡೆಯುತ್ತಿದ್ದಾಗ ಇನ್ಸ್‌ಸ್ಪೆಕ್ಟರ್, ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಟ್ರ್ಯಾಪ್ಗೆ ಒಳಗಾಗುತ್ತಿದ್ದಂತೆ ಗೋವಿಂದರಾಜು ಜೋರಾಗಿ ಕಿರುಚಾಡಿ ರಂಪಾಟ ಮಾಡಿದ್ದರು. ಇನ್ಸ್‌ಪೆಕ್ಟರ್ ಹೈಡ್ರಾಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ : ಬಾಂಗ್ಲಾ ಪರ ನಿಂತು ವಿಶ್ವಕಪ್‌ಗೆ ಪಾಕ್ ಬೆದರಿಕೆ ಹಾಕಿದ್ದೇಕೆ? ಕೊನೆಗೂ ‘ಬಾಲ ಮುದುರಿ’ ಲಂಕೆಗೆ ಹೋಗುವುದೇಕೆ?



















