ಬೆಂಗಳೂರು: ವಿಶ್ವವಿಖ್ಯಾತ ಕರಗಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಈಗಾಗಲೇ ಐತಿಹಾಸಿಕ ಕರಗ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ವಿಘ್ನಗಳು ಎದುರಾಗುತ್ತಿವೆ.
ಈ ಬಾರಿಯ ಕರಗ ಏ. 4ರಿಂದ ಏಪ್ರಿಲ್ 14ರ ವರೆಗೆ ನಡೆಯಲಿದೆ. ಹೀಗಾಗಿ ಕರಗದ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಬಿಬಿಎಂಪಿ ಕಾಮಗಾರಿ ಮಾತ್ರ ಕರಗಕ್ಕೆ ಅಡ್ಡಿಯಾಗುವ ಕಾರ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕರಗ ಹೋಗುವ ಮಾರ್ಗ ಮಧ್ಯೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ವೈಟ್ ಟಾಪಿಂಗ್ ಕಾಮಾಗಾರಿ ನಡೆಯುತ್ತಿದೆ. ಇನ್ನೂ ಪೂರ್ಣಗೊಳಿಸಿಲ್ಲ.
ಹೀಗಾಗಿ ಈ ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ರಥೋತ್ಸವಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಏಪ್ರಿಲ್ 12 ಚೈತ್ರ ಪೌರ್ಣಿಮೆಯಂದು ದ್ರೌಪದಿ ದೇವಿ ರಥ ಸಾಗುವ ದಾರಿಯೆಲ್ಲ ಈಗ ಗುಂಡಿಮಯವಾಗಿದೆ. ಕರಗದ ಹಿನ್ನೆಲೆಯಲ್ಲಿ ಕಾಮಾಗಾರಿ ಬೇಗ ಮುಗಿಸುವಂತೆ ಸಾರ್ವಜನಿಕರು ಹಾಗೂ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿತ್ತು. ಆದರೂ ಕಾಮಗಾರಿ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಕರಗ ಆರಂಭಕ್ಕೂ ಮುನ್ನ ಈ ಕಾಮಗಾರಿ ಪೂರ್ಣ ಮುಗಿಯದಿದ್ದರೆ, ಕರಗ ಎಂದಿನಂತೆ ರಥ ಬೀದಿಗಳಲ್ಲಿ ಸಾಗುವುದಿಲ್ಲ.
ಬಿಬಿಎಂಪಿಯು ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಹೆಚ್ಚು ರಸ್ತೆ ಅಗೆದಿದೆ. ಇದು ಅಧಿಕಾರಿಗಳ ಬೇಜವಾಬ್ದಾರಿತನ. ಆದಷ್ಟು ಬೇಗ ಕಾಮಾಗಾರಿ ಮುಗಿಸಬೇಕು. ಇಲ್ಲವಾದರೆ ಐತಿಹಾಸಿಕ ಕರಗ ಸಾಗಿಸುವುದು ಕಷ್ಟವಾಗುತ್ತದೆ ಎಂದು ಕರಗ ಸಮಿತಿ ಮನವಿ ಮಾಡಿದೆ.