ಯಾದಗಿರಿ: ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಮಹಿಳೆಯೊಬ್ಬರ ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಖಾರದ ಪುಡಿ ಎರಚಿ ಅಮಾನುಷವಾಗಿ ಕೃತ್ಯ ವೆಸಗಿದ್ದಾರೆ.
ಈ ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಲಾಗಿದ್ದು, 11 ಜನರ ವಿರುದ್ಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಅ.16 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಂಗಾಬಾಯಿ ಶಂಕರ ಚಿನ್ನಾರಾಠೋಡ (35) ಸಂತ್ರಸ್ತೆ. ಕಸ್ತೂರಿಬಾಯಿ ಡಾಕಪ್ಪ ಮತ್ತು ಡಾಕಪ್ಪ ಚಿನ್ನಾರಾಠೋಡ ಬಂಧಿತ ಆರೋಪಿಗಳು. ಇನ್ನುಳಿದಂತೆ ವಿಜಯಕುಮಾರ ಕಿಶನ್ ರಾಠೋಡ (ರೌಡಿ ಶೀಟರ್) ಮತ್ತು ಇತರೆ ಹತ್ತು ಮಂದಿ ಆರೋಪಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದು, ಮುಂಬೈ, ಪುಣೆಯಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಆರೋಗ್ಯ ಸಮಸ್ಯೆಯಿಂದಾಗಿ ಕಲಬುರಗಿ ಇರುವ ಚಿಕ್ಕಮ್ಮನ ಮನೆಗೆ ಆಗಾಗ ಹೋಗುತ್ತಿದ್ದಳು. ಆಕೆಯ ಅಳಿಯ ರಾಮು ರಾಠೋಡ ಎಂಬಾತ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ. ಆದ್ರೆ ಆರೋಪಿಗಳು ಅಳಿಯನ ಜೊತೆಗೆ ಸಂಬಂಧ ಇಟ್ಟುಕೊಂಡು ಓಡಿ ಹೋಗಿ ಮರ್ಯಾದೆ ತೆಗೆದಿದ್ದೀಯಾ ಅಂತ ನಿಂದಿಸಿ ಮನಸೋಇಚ್ಛೆ ಥಳಿಸಿದ್ದಾರೆ. ಸುಮಾರು 11 ಜನ ಗಂಗೂಭಾಯಿಯನ್ನ ಒದ್ದು ನೆಲಕ್ಕೆ ಕೆಡವಿದ್ದಾರೆ. ಆಕೆಯನ್ನ ಹಿಡಿದು ತಲೆಕೂದಲು ಕತ್ತರಿಸಿದ್ದಾರೆ. ನಂತರ ತಲೆಗೆ ಸುಣ್ಣ ಹಚ್ಚಿ, ಮೈಮೇಲೆ ಕಾರದಪುಡಿ ಹಾಕಿ ದುಷ್ಕೃತ್ಯ ಎಸಗಿದ್ದಾರೆ. ಜೊತೆಗೆ ಗಂಗಾಭಾಯಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ.



















