ಬಾರಾಬಂಕಿ: ಕ್ಷುಲ್ಲಕ ವಿಚಾರಕ್ಕೆ 50 ವರ್ಷದ ವ್ಯಕ್ತಿಯೊಬ್ಬ 25 ವರ್ಷದ ಯುವ ಐಸ್‌ಕ್ರೀಮ್ ವ್ಯಾಪಾರಿಯನ್ನು ನಡುರಸ್ತೆಯಲ್ಲೇ ಶಿರಚ್ಛೇದ ಮಾಡಿದ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ, ಕತ್ತರಿಸಿದ ತಲೆಯನ್ನು ಹಿಡಿದುಕೊಂಡು ತನ್ನ ಮನೆಗೆ ತೆರಳಿ, ಅಡುಗೆ ಮನೆಯಲ್ಲಿ ತನ್ನ ಪಕ್ಕದಲ್ಲೇ ಇಟ್ಟುಕೊಂಡು ಅಡುಗೆ ಮಾಡಿದ್ದಾನೆ.
ಮೃತನನ್ನು ಬಬ್ಲು (25) ಎಂದು ಗುರುತಿಸಲಾಗಿದ್ದು, ಈತ ಪ್ರತಿದಿನದಂತೆ ಶನಿವಾರವೂ ಪರ್ಸಾವಲ್ ಗ್ರಾಮಕ್ಕೆ ಐಸ್‌ಕ್ರೀಮ್ ಮಾರಾಟ ಮಾಡಲು ತೆರಳಿದ್ದ. ಈ ವೇಳೆ ಅಲ್ಲಿನ ನಿವಾಸಿ ಶಂಕರ್ ಯಾದವ್ ಎಂಬಾತನೊಂದಿಗೆ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ, ಶಂಕರ್ ಯಾದವ್ ಮಚ್ಚಿನಿಂದ ಬಬ್ಲು ಮೇಲೆ ಹಲ್ಲೆ ನಡೆಸಿ, ಜನರ ಕಣ್ಣ ಮುಂದೆಯೇ ಆತನ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ರಕ್ತಸಿಕ್ತ ತಲೆಯನ್ನು ಕೈಯಲ್ಲಿ ಹಿಡಿದುಕೊಂಡೇ ಶಂಕರ್ ತನ್ನ ಮನೆ ಕಡೆಗೆ ಹೆಜ್ಜೆ ಹಾಕಿದ್ದಾನೆ.
ತಲೆ ಪಕ್ಕದಲ್ಲೇ ಇಟ್ಟು ಅಡುಗೆ ಮಾಡುತ್ತಿದ್ದ ಆರೋಪಿ
ಗ್ರಾಮಸ್ಥರು ಈ ಕೊಲೆ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರ್ಪಿತ್ ವಿಜಯವರ್ಗಿಯ ನೇತೃತ್ವದ ತಂಡ, ಕೂಡಲೇ ಗ್ರಾಮಕ್ಕೆ ಧಾವಿಸಿತು. ಪೊಲೀಸರು ಆರೋಪಿ ಶಂಕರ್ ಯಾದವನ ಮನೆಗೆ ನುಗ್ಗಿದಾಗ ಅಲ್ಲಿನ ದೃಶ್ಯ ಕಂಡು ದಂಗಾಗಿದ್ದಾರೆ. ಹಂತಕ ಶಂಕರ್ ರಕ್ತಸಿಕ್ತ ತಲೆಯನ್ನು ಪಕ್ಕದಲ್ಲೇ ಇಟ್ಟುಕೊಂಡು ಸಮಾಧಾನವಾಗಿ ಅಡುಗೆ ಮಾಡುತ್ತಿದ್ದ! ತಕ್ಷಣವೇ ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆಗೆ ಬಳಸಿದ ಆಯುಧ ಮತ್ತು ಕತ್ತರಿಸಿದ ತಲೆಯನ್ನು ವಶಪಡಿಸಿಕೊಂಡಿದ್ದಾರೆ.
ಕೊಲೆಯಾದ ಬಬ್ಲು ತನ್ನ ಕುಟುಂಬದ ಆಧಾರಸ್ತಂಭವಾಗಿದ್ದ. ಮೂವರು ಸಹೋದರರಲ್ಲಿ ಹಿರಿಯವನಾಗಿದ್ದ ಈತ, ಕೂಲಿ ಕೆಲಸ ಮತ್ತು ಐಸ್‌ಕ್ರೀಮ್ ಮಾರಾಟ ಮಾಡಿ ತನ್ನ ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳನ್ನು ಸಾಕಿ ಸಲಹುತ್ತಿದ್ದ. ತಂದೆಯ ಸಾವಿನಿಂದ ಮಕ್ಕಳು ಅನಾಥರಾಗಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಅಸಲಿಗೆ ಈ ಕೊಲೆಗೆ ಪ್ರಚೋದನೆ ನೀಡಿದ ಆ ಕ್ಷಣದ ಜಗಳವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸಾಲ ಕೊಟ್ಟಿದ್ದ ಚಿನ್ನ, ನಗದು ಮರಳಿ ಕೇಳಿದ ವೃದ್ಧೆಯನ್ನು ಕೊಂದೇ ಬಿಟ್ಟ ಮನೆಗೆಲಸದಾಕೆ!



















